
ಕುಶಾಲನಗರ, ಸೆ 15: ಗೊಂದಿಬಸವನಹಳ್ಳಿ ಗ್ರಾಮದ ಅಭಿವೃದ್ದಿಗೆ ಶಾಸಕ ಡಾ.ಮಂಥರ್ ಗೌಡ ಅವರು 1 ಕೋಟಿ ರೂ ಅನುದಾನ ಒದಗಿಸಿದ್ದು ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕುಶಾಲನಗರ ಪುರಸಭೆ ನಾಮನಿರ್ದೇಶಿತ ಸದಸ್ಯ ಜಿ.ಬಿ.ಜಗದೀಶ್ ತಿಳಿಸಿದರು.
ಪುರಸಭೆ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಅನುದಾನದಲ್ಲಿ ರೂ 30 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗ್ರಾಮದಲ್ಲಿ ಇಬ್ರಾಹಿಂ ಅವರ ಮನೆಯಿಂದ ಗೌಸು ಎಂಬವರ ಮನೆವರೆಗೆ ರೂ 30 ಲಕ್ಷ ವೆಚ್ಚದಲ್ಲಿ 175 ಮೀಟರ್ ಉದ್ದದ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗುತ್ತಿದೆ.
ಕಳೆದ 25 ವರ್ಷಗಳ ಬೇಡಿಕೆ ಇದೀಗ ಈಡೇರಿದೆ. ಈ ಪ್ರದೇಶದಲ್ಲಿ ಸುಮಾರು 100 ಕುಟುಂಬಗಳಿದ್ದು ಕಲ್ಲು, ಗುಂಡಿಮಯ ರಸ್ತೆಯಲ್ಲಿ ಸಂಚರಿಸುವುದು ದುಸ್ಥರವಾಗಿತ್ತು. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕೆಸರುಮಯ ರಸ್ತೆಯಲ್ಲಿ ಸಂಚರಿಸಬೇಕಿತ್ತು.
ಈ ಹಿನ್ನಲೆಯಲ್ಲಿ ಶಾಸಕರ ಗಮನಕ್ಕೆ ತಂದ ಮೇರೆಗೆ ಅಗತ್ಯ ಅನುದಾನ ಒದಗಿಸಿದ್ದು ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಮಡಿಕೇರಿ ಕ್ಷೇತ್ರ ಶಾಸಕರು ಗೊಂದಿಬಸವನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆಂದು ರೂ ಒಂದು ಕೋಟಿ ಅನುದಾನ ಒದಗಿಸಿದ್ದರು. ಗ್ರಾಮದಲ್ಲಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿದ್ದು ಸುಬ್ರಮಣ್ಯ ಕಾಫಿ ವರ್ಕ್ಸ್, ಗಂಧದಕೋಟಿ ಸಂಪರ್ಕ ರಸ್ತೆ, ಭಾರತ್ ಗ್ಯಾಸ್ ಗೋಡಾನ್ ನಿಂದ ಹಾರಂಗಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಸೇರಿಸಲಾಗಿದೆ ಎಂದರು.
ಸ್ಥಳೀಯ ನಿವಾಸಿ ಇಬ್ರಾಹಿಂ ಮಾತನಾಡಿ, ಕಳೆದೆರೆಡು ದಶಕಗಳಿಂದ ಅಭಿವೃದ್ದಿ ಕಾಣದ ಈ
ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸವಾಗಿತ್ತು. ಬಾಡಿಗೆ ಆಟೋಗಳು ಕೂಡ ಇಲ್ಲಿಗೆ ಪ್ರಯಾಣಿಕರನ್ನು ಕರೆತರಲು ಮುಂದಾಗುತ್ತಿರಲಿಲ್ಲ. ಇದರಿಂದ ತೀವ್ರ ಅನಾನುಕೂಲ ಎದುರಾಗಿತ್ತು. ಈ ದುಸ್ಥಿತಿ ಬಗ್ಗೆ ಇತ್ತೀಚೆಗೆ ಶಾಸಕರ ಗಮನಕ್ಕೆ ತಂದು ಅಭಿವೃದ್ಧಿಪಡಿಸಲು ಮನವಿ ಮಾಡಲಾಗಿತ್ತು. ಕೂಡಲೆ ರೂ 30 ಲಕ್ಷ ಅನುದಾನ ಒದಗಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಈ ಸಂದರ್ಭ ಗ್ರಾಮಸ್ಥರಾದ ಹಮೀದ್, ಹಂಸ, ಮುಹಮ್ಮದ್, ಹೇಮಂತ್, ಮೋಣು ಮತ್ತಿತರರು ಇದ್ದರು.
Back to top button
error: Content is protected !!