ಕುಶಾಲನಗರ, ಅ 11: ಜಾತ್ಯತೀತ ಜನತಾದಳದ ಕುಶಾಲನಗರ ತಾಲೂಕು ಘಟಕದ ಕಾರ್ಯಕರ್ತರ ಸಭೆ ಕುಶಾಲನಗರದ ಗೌಡ ಸಮಾಜದಲ್ಲಿ ನಡೆಯಿತು.
ತಾಲೂಕು ಘಟಕ ಅಧ್ಯಕ್ಷ ಪಿ.ಡಿ.ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಜೆಡಿಎಸ್ ಮುಖಂಡ, ಸಮಾಜ ಸೇವಕ ನಾಪಂಡ ಮುತ್ತಪ್ಪ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮತ್ತೊಮ್ಮೆ ಕುಮಾರಣ್ಣ ಎಂಬ ಸಂದೇಶ ಸಾರುವ ಮೂಲಕ ಕೊಡಗಿನಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗುತ್ತಿದೆ. ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಎಲ್ಲರೂ ಏಕಮುಖವಾಗಿ ಒಗ್ಗಟ್ಟಿನಿಂದ ದುಡಿಯುವ ಸಂಕಲ್ಪವನ್ನು ಮಾಡಿದ್ದೇವೆ. ಎಚ್.ಡಿ. ಕುಮಾರಸ್ವಾಮಿ ಅವರ ಕನಸಾದ ಪಂಚತಂತ್ರ ಯೋಜನೆಯು ಚಾಲನೆಯಾಗಿದ್ದು ಕೊಡಗಿಗೆ ಆಗಮಿಸುತ್ತಿರುವ ಕುಮಾರಸ್ವಾಮಿ ಅವರನ್ನು ಬೃಹತ್ ಮಟ್ಟದ ಕಾರ್ಯಕರ್ತರ ಸಮೂಹದಲ್ಲಿ ಸ್ವಾಗತಿಸಬೇಕು. ಪಕ್ಷದ ಸಾಧನೆ ಕುರಿತು ರಚಿಸಿರುವ ಪುಸ್ತಕಗಳನ್ನು ಪ್ರತಿ ಮನೆಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು. 2023 ಕ್ಕೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ರಾಜ್ಯದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಮತ್ತೊಮ್ಮೆ ಕೊಡಗಿನ ಜನತೆ ಪ್ರಾದೇಶಿಕ ಪಕ್ಷದತ್ತ ಒಲವು ತೋರಿಸುತ್ತಿರುವುದು ಶ್ಲಾಘನೀಯ. ಕಾರಣವೇನೆಂದರೆ ಇಂದಿನ ಸಭೆಯಲ್ಲಿ ಬೃಹತ್ ಮಟ್ಟದಲ್ಲಿ ಯುವ ಸಮೂಹ ಭಾಗಿಯಾಗಿದೆ. ಹಾಗಾಗಿ ಈ ಯುವ ಸಮೂಹದ ರೂವಾರಿ ನಾಪಂಡ ಮುತ್ತಪ್ಪ ಅವರನ್ನು ನಮ್ಮ ಪಕ್ಷದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದಲ್ಲಿ ಮತ್ತಷ್ಟು ಯುವ ಸಮೂಹ ನಮ್ಮ ಪಕ್ಷದತ್ತ ಮುಖ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದರು.
ಕೊಡಗು ಯುವ ಜನತಾದಳ ಜಿಲ್ಲಾ ಅಧ್ಯಕ್ಷರಾದ ಸಿ.ಎಲ್. ವಿಶ್ವ ಮಾತನಾಡಿ, ಇಷ್ಟು ವರ್ಷದ ಕೊಡಗಿನ ಇತಿಹಾಸದ ರಾಜಕಾರಣದಲ್ಲಿ ಬಿಜೆಪಿ ಪಕ್ಷವು ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಕೋಮು ಸಂಘರ್ಷವನ್ನು ಉಂಟು ಮಾಡಿ ತಮ್ಮ ಪಕ್ಷದ ಲಾಭಕ್ಕಾಗಿ ಅಧಿಕಾರದ ಚುಕ್ಕಾಣೆಗಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಜನಸಾಮಾನ್ಯರ ದಿನ ನಿತ್ಯದ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಇವೆಲ್ಲವೂ ಸರಿ ಹೋಗಬೇಕಾದರೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಲೇಬೇಕು. ಮತ್ತೊಮ್ಮೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ಮಾತ್ರ ಈ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.
ಇದೇ ಸಂದರ್ಭ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಸುಮಾರು 200 ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರ ನೀಡಲಾಯಿತು.
ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಹನಕೋಡ್ ಸುರೇಶ್, ಎಸ್ ಸಿ, ಎಸ್ ಟಿ ಘಟಕದ ಜಿಲ್ಲಾಧ್ಯಕ್ಷ ರಾಮಚಂದ್ರ, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಶಿವದಾಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪವತಿ ರಮೇಶ್, ಮುಖಂಡರಾದ ಅಜ್ಜಳ್ಳಿ ರವಿ, ಎಂ.ಎಸ್. ರಾಜೇಶ್, ಎಚ್.ಡಿ. ಚಂದ್ರು, ಹೆಬ್ಬಾಲೆ ಮಧುಸೂದನ್ ಮತ್ತಿತರರು ಹಾಜರಿದ್ದರು.
Back to top button
error: Content is protected !!