ಟ್ರೆಂಡಿಂಗ್
ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಕುಶಾಲನಗರ, ಏ 10: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮ ಮಟ್ಟದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚೌಡಮ್ಮ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ಪಕ್ಷಿ ಫ್ರೆಂಡ್ಸ್ ತಂಡ ದ್ವಿತೀಯ, ಬಿ. ಆರ್. ಫ್ರೆಂಡ್ಸ್ ತಂಡವು ತೃತೀಯ ಸ್ಥಾನ ಪಡೆಯಿತು.
ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯೆ ಫಿಲೋಮಿನಾ ಕ್ರೀಡಾಕೂಟ ಉದ್ಘಾಟಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ನಡೆಯುವುದರಿಂದ ಯುವ ಜನಾಂಗ ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪೂರಕವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿ, ಯುವಕರ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಜೊತೆಗೆ ಎಲ್ಲರೂ ಒಗ್ಗೂಡುವುದರಿಂದ ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಹರಿಸಲು ಸಹಕಾರಿಯಾಗುವುದು ಎಂದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯೆ ಗೌರಮ್ಮ, ಮಾಜಿ ಸದಸ್ಯ ಚಂದ್ರಶೇಖರ್, ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟು ಸೋಮಶೇಖರ್, ಗ್ರಾಮದ ಪ್ರಮುಖರಾದ ಪುಟ್ಟೇಗೌಡ, ಶ್ರೀನಿವಾಸ್, ರವಿ, ಕೃಷ್ಣಪ್ಪ ಸೇರಿದಂತೆ ಗ್ರಾಮಸ್ಥರು, ಕ್ರೀಡಾಪಟುಗಳು ಹಾಜರಿದ್ದರು.
ವಿಜೇತ ತಂಡಕ್ಕೆ ಬಹುಮಾನವನ್ನು ಚಂದ್ರಶೇಖರ್ ವಿತರಣೆ ಮಾಡಿದರು.
ಕ್ರೀಡಾಕೂಟದಲ್ಲಿ 6 ತಂಡಗಳು ಭಾಗವಹಿಸಿದವು.



