ಕುಶಾಲನಗರ, ಅ 14: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕುಶಾಲನಗರದ ವಿ.ಪಿ. ಶಶಿಧರ್ ಅವರು ರಾಜಕೀಯ ನಿವೃತ್ತಿ ಘೋಷಿಸಿರುವ ವಿಚಾರ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ ಎಂದು ತೊರೆನೂರು ಗ್ರಾಮ ಪಂಚಾಯತಿ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್. ಸಿ. ಮೂರ್ತಿ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರದಿಂದ ವಿಪಿಎಸ್ ಅವರು ಅಜ್ಞಾತರಾಗಿ
ಉಳಿದಿದ್ದು ಯಾರಿಗೂ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ.
ವಿ.ಪಿ. ಶಶಿಧರ್ ಅವರು ಮೈಸೂರಿನಿಂದ ಕುಶಾಲನಗರಕ್ಕೆ ಆಗಮಿಸಿ, ತಮ್ಮ ಅಭಿಮಾನಿಗಳು, ಹಿತೈಷಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಸಬೇಕು. ತಮ್ಮ ರಾಜಕೀಯ ನಿವೃತ್ತಿಯ ನಿರ್ಧಾರದ ಹಿಂದಿನ ಕಾರಣಗಳನ್ನು ಸ್ಪಷ್ಟವಾಗಿ ತಿಳಿಸಿ, ಮುಂದಿನ ರಾಜಕೀಯ ನಡೆ ಕುರಿತು ತಮ್ಮ ನಿಲುವನ್ನು ಬಹಿರಂಗಪಡಿಸಬೇಕು.
ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸುತ್ತಾ, ಸಾವಿರಾರು ಕಾರ್ಯಕರ್ತರೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಶಶಿಧರ್ ಅವರ ರಾಜಕೀಯ ನಿರ್ಧಾರವು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಶಶಿಧರ್ ಅವರ ರಾಜಕೀಯ ನಿವೃತ್ತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಾರ್ವಜನಿಕ ಜೀವನದಲ್ಲಿ ಅವರೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ನಷ್ಟ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಅವರ ರಾಜಕೀಯ ಪಯಣದಲ್ಲಿ ದೀರ್ಘಕಾಲದಿಂದ ಜೊತೆಯಾಗಿ ಸಾಗಿರುವ ಕಾರ್ಯಕರ್ತರ ಭವಿಷ್ಯ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಅವರು ತಮ್ಮ ನಿರ್ಧಾರದ ಕುರಿತು ಅಭಿಮಾನಿಗಳೊಂದಿಗೆ ಮುಕ್ತವಾಗಿ ಚರ್ಚಿಸಬೇಕು ಎಂಬುದು ಎಲ್ಲರ ಆಶಯವಾಗಿದೆ.
ಆದ್ದರಿಂದ, ವಿ.ಪಿ. ಶಶಿಧರ್ ಅವರು ಕುಶಾಲನಗರಕ್ಕೆ ಆಗಮಿಸಿ ಅಭಿಮಾನಿಗಳು ಮತ್ತು ಹಿತೈಷಿಗಳೊಂದಿಗೆ ಸಭೆ ನಡೆಸಿ, ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆ ಸ್ಪಷ್ಟನೆ ನೀಡಬೇಕು ಹಾಗೂ ಮುಂದಿನ ರಾಜಕೀಯ ನಡೆ ಕುರಿತು ತಮ್ಮ ನಿಲುವನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ
ಹೆಬ್ಬಾಲೆ ಗ್ರಾಮ ಪಂಚಾಯತಿ ವಲಯ ಕಾಂಗ್ರೆಸ್ ಅಧ್ಯಕ್ಷ ರವಿಚಂದ್ರ, ಹೆಬ್ಬಾಲೆ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಹೆಚ್.ಇ.ರವಿ, ಪ್ರಮುಖರಾದ ಮಹೇಶ್ ಇದ್ದರು.
Back to top button
error: Content is protected !!