ಪ್ರತಿಭಟನೆ

ಕುಶಾಲನಗರ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಹೋಬಳಿ ರೈತ ಸಂಘದಿಂದ ಪ್ರತಿಭಟನೆ

ಕುಶಾಲನಗರ, ಸೆ 22: ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಹೋಬಳಿ ರೈತ ಸಂಘದಿಂದ ಕುಶಾಲನಗರ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟಿಸಲಾಯಿತು.

ಕೊಡಗು ಜಿಲ್ಲೆಯ ಇತರೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಕುಶಾಲನಗರ ತಾಲೂಕನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸದಿರುವುದು ಖಂಡನೀಯ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರಕಾರ ಮತ್ತು ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕರು, ಸರಕಾರ ಮತ್ತು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಲಾಯಿತು.

ಸಂಘದ ಅಧ್ಯಕ್ಷ
ಕ್ಲೈವ್ ಪೊನ್ನಪ್ಪ ಮಾತನಾಡಿ, ಕೊಡಗಿನ ಕುಶಾಲನಗರ ಬೇರ್ಯಾವುದೋ ದೇಶದಲ್ಲಿಲ್ಲ. ಜಿಲ್ಲೆಯ ಇತರೆ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಕುಶಾಲನಗರವನ್ನು ಯಾಕೆ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರು. ಅಧಿಕಾರಿಗಳು ಸರಕಾರಕ್ಕೆ ಸೂಕ್ತ ವರದಿ ಸಲ್ಲಿಸಬೇಕಿದೆ. ಸರಕಾರ ವಿಳಂಭ ಮಾಡದೆ ಬರಪೀಡಿತ ಎಂದು ಘೋಷಣೆ ಮಾಡಬೇಕು. ತಪ್ಪಿದಲ್ಲಿ ರೈತ ಸಂಘಟನೆಗಳ ಸಹಕಾರ ಪಡೆದು ಕೊಡಗು ಬಂದ್ ಗೆ ಮುಂದಾಗಬೇಕಾಗುತ್ತದೆ ಎಂದು‌ ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ
ಚಂದ್ರಶೇಖರ್ ಹೇರೂರು ಮಾತನಾಡಿ, ಕುಶಾಲನಗರ ತಾಲೂಕಿನಲ್ಲಿ ವಾಡಿಕೆಯಂತೆ 50 ಇಂಚು ಮಳೆಯಾಗುತ್ತಿತ್ತು. ಆದರೆ ಈ ಸಾಲಿನಲ್ಲಿ 16 ಇಂಚು ಕೂಡ ದಾಟಿಲ್ಲ. ಸೋಮವಾರಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರೂ ಕೂಡ ಆ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದು ಕುಶಾಲನಗರಕ್ಕೆ ಮಾಡಿದ ಅನ್ಯಾಯ. ಶಾಸಕರು ಇದರ ಬಗ್ಗೆ ಗಮನಹರಿಸಿ ಸರಕಾರದ ಗಮನ ಸೆಳೆಯಬೇಕಿದೆ ಎಂದು ಆಗ್ರಹಿಸಿದರು.

ಮುಖಂಡ ಬಿ.ಬಿ.ಭಾರತೀಶ್ ಮಾತನಾಡಿ, ಈಗಾಗಲೆ ಅಂತರ್ಜಲ‌ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದ ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ ಹಾಹಾಕಾರ ಉಂಟಾಗುವ ಪರಿಸ್ಥಿತಿ ಬರಲಿದೆ. ಜಿಲ್ಲೆಯ ಎಲ್ಲಾ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಕುಶಾಲನಗರವನ್ನು ಕೈಬಿಟ್ಟಿರುವುದು ಯಕ್ಷಪ್ರಶ್ನೆಯಾಗಿದೆ. ಅಧಿಕಾರಿಗಳು ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲು ಶಾಸಕಾಂಗ ಕಾರ್ಯಾಂಗಕ್ಕೆ ಆದೇಶ ಮಾಡಬೇಕಿದೆ. ಆದಾಗ ಮಾತ್ರ ನಮ್ಮ ತಾಲೂಕಿನ ಸಮಸ್ಯೆ ಸಂಬಂಧಿಸಿದವರಿಗೆ ಮನವರಿಕೆಯಾಗಲಿದೆ ಎಂದರು.
ಇದೇ ಸಂದರ್ಭ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ, ದಾಸಂಡ ರಮೇಶ್, ಕುಂಜಲಿನ್ ಮಂಜುನಾಥ್, ಅರುಣ್ ಚೆಂಗಪ್ಪ, ವಿನಯ್, ಹಿತೇಶ್, ಸುನಿತ್ ಕೊಮರಪ್ಪ , ಸ್ಟೀಫನ್ , ಗೌತಮ್, ಡಿಸಾಂತ್, ಮಂಜು , ವಸಂತ ಹರನಬೈಲ್, ಉದಯ, ಪ್ರಶಾಂತ್ ಕಲ್ಲೂರು ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!