ಪ್ರತಿಭಟನೆ

ಶಾಲಾ ಜಾಗ ಅತಿಕ್ರಮಣ, ದಬ್ಬಾಳಿಕೆ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

ಕುಶಾಲನಗರ, ಅ 27:
ಶಾಲಾ ಶೈಕ್ಷಣಿಕ‌ ಉದ್ದೇಶಕ್ಕೆ ಮೀಸಲಿರಿಸಿದ್ದ ಜಾಗವನ್ನು ಪ್ರಭಾವಿ ವ್ಯಕ್ತಿ ಅತಿಕ್ರಮಿಸಿದ್ದಾರೆ ಎಂದು ಆರೋಪಿಸಿ ಸೀಗೆಹೊಸೂರು ಮತ್ತು ಜೇನುಕಲ್ಲು ಬೆಟ್ಟ ಗ್ರಾಮಸ್ಥರು ಪ್ರತಿಭಟನೆ‌ ನಡೆಸಿದರು.

ಕುಶಾಲನಗರ ಕಾರು ನಿಲ್ದಾಣದಿಂದ ತಹಸೀಲ್ದಾರ್ ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು ಅತಿಕ್ರಮಣದಾರನ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೂಡುಮಂಗಳೂರು ಗ್ರಾಪಂ‌ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ಎಂಬವರು ಸೀಗೆಹೊಸೂರು ಗ್ರಾಮದ ಸ.ನಂ 2/1 ರಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಗ್ರಾಮಸ್ಥರು ಮೀಸಲಿರಿಸಿದ್ದ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಶಾಲಾ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿದ್ದಾರೆ. ಪ್ರಶ್ನಿಸಿದ ಗ್ರಾಮಸ್ಥರ ವಿರುದ್ದ ದಬ್ಬಾಳಿಕೆ ನಡೆಸಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.
ಸದರಿ 1.6 ಎಕರೆ ಭೂಮಿಯನ್ನು ಆತ ತನ್ನ ತಂದೆಯ ಹೆಸರಿನಲ್ಲಿ‌ ಸಕ್ರಮ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ‌ ನಡೆಸಿ ಅತಿಕ್ರಮಣ ತೆರವುಗೊಳಿಸಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅತಿಕ್ರಮಣದಾರನಿಗೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಕಛೇರಿ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್, ಭಾಸ್ಕರ್ ನಾಯಕ್ ಎಂಬಾತ ಸರಕಾರಿ ಭೂಮಿ‌ ಕಬಳಿಸಲು ಹುನ್ನಾರ ನಡೆಸಿದ್ದಾನೆ. ಶಾಲಾ ಅಭಿವೃದ್ಧಿ ಉದ್ದೇಶಕ್ಕೆ‌ ಮೀಸಲಿರಿಸಿದ್ದ ಜಾಗ ಕಬಳಿಸಲು ಶಾಲಾ ಆವರಣದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿದ್ದಾರೆ‌‌. ನೈಸರ್ಗಿಕ ಜಲಮೂಲಕ್ಕೆ ಮಣ್ಣು ತುಂಬಿದ ಹಿನ್ನೆಲೆಯಲ್ಲಿ ಶಾಲಾವರಣಕ್ಕೆ‌ ನೀರು‌ ನುಗ್ಗುತ್ತಿದೆ. ತನ್ನ ತಂದೆ ಹೆಸರಿನಲ್ಲಿ ಸದರಿ ಜಾಗದ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಇದಕ್ಕೆ ಪೂರಕವಾಗಿ ಕೆಲ ಭ್ರಷ್ಟ ಅಧಿಕಾರಿಗಳು ಕೂಡ ದಾಖಲೆ‌ ನಿರ್ಮಿಸಲು ಸಿದ್ದತೆ ನಡೆಸಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರ ವಿರುದ್ದ ದಬ್ಬಾಳಿಕೆ ನಡೆಸಲಾಗುತ್ತಿದೆ.‌ಅಲ್ಲದೆ ಈತ ನಕಲಿ ಜಾತಿ ಪ್ರಮಾಣ‌ಪತ್ರ ಪಡೆದು ಸರಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಹಾರಂಗಿ‌ ಅಣೆಕಟ್ಟೆ ವ್ಯಾಪ್ತಿಯಲ್ಲಿ ನದಿ ತಟದಲ್ಲಿ ಅಕ್ರಮ ತೋಟ ನಿರ್ಮಿಸಿಕೊಂಡಿದ್ದಾನೆ ಎಂದು ಆರೋಪಿಸಿದರು.
ಈ ಎಲ್ಲದರ‌ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದರು.
ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು
ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ
ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ್ ಕುಮಾರ್, ಗ್ರಾಮಸ್ಥರಾದ ದೊಡ್ಡಯ್ಯ, ಪಾರ್ವತಮ್ಮ, ರೈತ ಸಂಘದ ಅಧ್ಯಕ್ಷ ಅಪ್ಪಾಜಿ, ಯೋಗಾನಂದ, ವೆಂಕಟರಮಣ, ರಮೇಶ್, ಹರ್ಷಿತಾ ಮೋಹನ್ ಕುಮಾರ್, ಜಯಮ್ಮ, ಸರೋಜ, ಕಾವ್ಯ, ಲತಾ ಜೋಯಪ್ಪ, ದಾಮೋದರ್, ಕುಮಾರ್, ಮಲ್ಲೇಶ್, ಕುಶಾಲ್, ಆನಂದ, ಮೋಹನ್, ಚಂದ್ರು, ಸುಚಿತ್ರಾ, ಲೋಹಿತ್, ಪಲ್ಲವಿ ಮಾದೇವ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!