ಕುಶಾಲನಗರ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನ.1 ರಿಂದ 3 ರ ತನಕ ನಡೆದ 7ನೇ ನ್ಯಾಷನಲ್ ಸೀನಿಯರ್, ಜೂನಿಯರ್ ಸೆಸ್ಟೋಬಾಲ್ ಫೆಡರೇಷನ್ ಕಪ್ ನಲ್ಲಿ ಪದಕ ಗೆದ್ದ ಕರ್ನಾಟಕವನ್ನು ಪ್ರತಿನಿಧಿಸಿದ ಕೊಡಗಿನ ಕ್ರೀಡಾಪಟುಗಳಿಗೆ
ಕೊಡಗಿನ ಗಡಿಭಾಗ ಕೊಪ್ಪದ ಕಾವೇರಿ ಪ್ರತಿಮೆ ಬಳಿ ಕೊಡಗು ಸೆಸ್ಟೋಬಾಲ್ ಅಸೋಸಿಯೇಷನ್ ಹಾಗೂ ವಿವಿಧ ಸಂಘಸಂಸ್ಥೆಗಳ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು.
ಕರ್ನಾಟಕ ತಂಡದಲ್ಲಿ ಬಹುತೇಕ ಕೊಡಗು ಜಿಲ್ಲೆಯ ಕ್ರೀಡಾಪಟುಗಳೇ ಇದ್ದು, ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ (ದ್ವಿತೀಯ ಸ್ಥಾನ) ಮತ್ತು ಬಾಲಕರ ವಿಭಾಗದಲ್ಲಿ ಕಂಚಿನ ಪದಕ (ತೃತೀಯ ಸ್ಥಾನ) ಗಳಿಸಿ ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಸೋಸಿಯೇಷನ್ ಪದಾಧಿಕಾರಿ ಆದಂ ಎಸ್, ಇದು ಸುಮ್ಮನೆ ಬಂದ ಗೆಲುವಲ್ಲ. ಇದರ ಹಿಂದೆ ಮಕ್ಕಳ ಅಗಾಧ ಶ್ರಮವಿದೆ. 25 ರಾಜ್ಯಗಳ ನಡುವೆ ಉತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಆಗುವುದು ಸಣ್ಣ ವಿಷಯವಲ್ಲ. ಕೊಡಗು ಕ್ರೀಡಾ ಜಿಲ್ಲೆ, ಕೇವಲ ಹಾಕಿ, ಕ್ರಿಕೆಟ್ ಅಲ್ಲ, ಇಂತಹ ವಿಶೇಷ ಕ್ರೀಡೆಗಳಲ್ಲೂ ತನ್ನದೇ ಆದ ಛಾಪು ಮೂಡಿಸಬಲ್ಲದು ಎಂದು ನಮ್ಮ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸಿದ್ದಾರೆ. ಸರಕಾರ ಕೂಡ ಇವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವದಂತಹ ಸಂದರ್ಭದಲ್ಲಿ ಸನ್ಮಾನಿಸಬೇಕು. ನಮ್ಮ ಮಕ್ಕಳು ಮುಂದಿನ ಬಾರಿ ಚಾಂಪಿಯನ್ ಆಗಿ ಹೊರಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ವಿ.ಪಿ ಶಶಿಧರ್ ಅವರು ಮಾತನಾಡಿ, ಕಳೆದ ವರ್ಷ ಕೂಡ ನಮ್ಮ ಮಕ್ಕಳು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಈ ಬಾರಿಯೂ ಜಾನ್ಸನ್ ಸರ್ ಮತ್ತು ಮಂಜುನಾಥ್ ಅವರ ತರಬೇತಿಯಲ್ಲಿ ಓದು ಮತ್ತು ಕ್ರೀಡೆಯ ನಡುವೆ ಸಾಕಷ್ಟು ಶ್ರಮಪಟ್ಟು ಈ ಸಾಧನೆ ಮಾಡಿದ್ದಾರೆ. ಇದು ಕೊಡಗಿನ ಹೆಮ್ಮೆ. ಮುಂದಿನ ದಿನಗಳಲ್ಲಿ ಕೊಡಗು, ರಾಜ್ಯ ಮತ್ತು ದೇಶದ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.
ಬಾಲಕಿಯರ ತಂಡದ ನಾಯಕಿಯಾಗಿ ಸಂಜನಾ ವಿರಾಜಪೇಟೆ,
ಬಾಲಕರ ತಂಡದ ನಾಯಕನಾಗಿ ಸೋಮವಾರಪೇಟೆಯ ರಿಯಾನ್ ತಂಡವನ್ನು ಮುನ್ನಡೆಸಿದರು.
ತರಬೇತುದಾರರಾದ ಜಾನ್ಸನ್ ಮತ್ತು ಮಂಜುನಾಥ್ ಸೇರಿದಂತೆ ಎಲ್ಲಾ ಕ್ರೀಡಾಪಟುಗಳಿಗೆ ಹೂಮಾಲೆ ಹಾಕಿ, ಸನ್ಮಾನಿಸಲಾಯಿತು.
ಕೊಪ್ಪ ಗಡಿಯಿಂದ ಕುಶಾಲನಗರದ ಗಣಪತಿ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಯಿತು.
ಇದೇ ಸಂದರ್ಭ
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಅಧ್ಯಕ್ಷ ದೀಪಕ್, ಪ್ರಮುಖರಾದ ಆನಂದ್ ಕನ್ನಡಿಗ, ಜಯಸ್ವಾಮಿ,
ಉದ್ಯಮಿ ಭಾಷಾ ಎಂ. ಎಸ್, ಕೊಡಗು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರುಬೀನಾ ಎಂ.ಎ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಕಾಂಗ್ರೆಸ್ ಮುಖಂಡ ಅಜೀಜ್, ರಮ್ಯ ಟಿ.ಪಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.
Back to top button
error: Content is protected !!