ಕುಶಾಲನಗರ, ಏ 20: ಹಾರಂಗಿ ನಿವಾಸಿಗಳ ಚುನಾವಣಾ ಬಹಿಷ್ಕಾರ ಎಚ್ಚರಿಕೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾರಂಗಿ ಹಿನ್ನೀರಿನಲ್ಲಿ ಆರಂಭಿಸಿರುವ ಜಲಕ್ರೀಡೆಯಿಂದ ನೀರು ಕಲುಷಿತಗೊಂಡು ಇದನ್ನೇ ಕುಡಿಯಲು ಬಳಸುವ ಗ್ರಾಮಸ್ಥರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಕೂಡಲೆ ಜಲಕ್ರೀಡೆ ಸ್ಥಗಿತಗೊಳಿಸಬೇಕು, ಇಲ್ಲದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ನಿವಾಸಿಗಳು ಎಚ್ಚರಿಸಿದ್ದರು.
ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್, ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಕಂದಾಯ ಇಲಾಖೆಯ ಸಂತೋಷ್, ಗ್ರಾಮಸ್ಥರೊಡನೆ ಚರ್ಚಿಸಿ ಮಾಹಿತಿ ಪಡೆದರು.
ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್, ಬೇಸಿಗೆಯಲ್ಲಿ ನೀರಿನ ಕೊರತೆ ನಡುವೆ ಜಲಕ್ರೀಡೆ ನಡೆಸುತ್ತಿರುವುದು ಖಂಡನೀಯ. ಜಲಾಶಯದಲ್ಲಿ ನೀರಿನ ಸಂಗ್ರಹ ಕ್ಷೀಣಿಸಿದ್ದು, ಜಲಕ್ರೀಡೆಯಿಂದ ನೀರು ಕಲ್ಮಶಗೊಳ್ಳುತ್ತಿದೆ. ಆದ್ದರಿಂದ ಗ್ರಾಮಸ್ಥರಿಗೆ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಅಗತ್ಯ ಅನುಮತಿ ಇಲ್ಲದೆ ಈ ಚಟುವಟಿಕೆ ಆರಂಭಿಸಲಾಗಿದೆ ಎಂದು ಅವರು ಆರೋಪಿಸಿದರು. ಜಲಕ್ರೀಡೆ ನಡೆಸಲು ನೀಡಿರುವ ಅನುಮತಿ ಪತ್ರವನ್ನು ಒದಗಿಸುವಂತೆ ಆಗ್ರಹಿಸಿದರು. ಅನುಮತಿ ಪತ್ರ ಕೇಳಿದರೆ ಅಧಿಕಾರಿಗಳ ನಡುವೆ ನಡೆದ ಪತ್ರ ವ್ಯವಹಾರದ ಪ್ರತಿಗಳನ್ನು ಒದಗಿಸುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ ಅವರು, ಕೂಡಲೆ ಜಲಕ್ರೀಡೆ ಸ್ಥಗಿತಗೊಳಿಸಲು ಕ್ರಮ ವಹಿಸುವಂತೆ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅನಿತಾ ಭಾಸ್ಕರ್, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಕೂಡುಮಂಗಳೂರು ಗ್ರಾಪಂ ಪಿಡಿಒ ಸಂತೋಷ್, ಕಂದಾಯ ನಿರೀಕ್ಷಕ ಸಂತೋಷ್ ಇದ್ದರು.
Back to top button
error: Content is protected !!