ಕುಶಾಲನಗರ, ಏ 18: ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕುಶಾಲನಗರ ಘಟಕ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಿವೇಕಾನಂದ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಲೆ ಅಗ್ನಿಶಾಮಕ ಠಾಣಾಧಿಕಾರಿ ಎನ್.ಎ.ರಂಜಿತ್ ಚಾಲನೆ ನೀಡಿದರು.
ಅಗ್ನಿ ಅನಾಹುತಗಳ ವಿಧಗಳು, ಅವುಗಳನ್ನು ನಿಯಂತ್ರಿಸುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಲತೇಶ್ ಕುಮಾರ್ ಅವರು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಥಳೀಯ ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ ಸಂಗ್ರಹಿಸಿಟ್ಟುಕೊಳ್ಳುವುದು ಅವಶ್ಯಕ. ಅಪಾಯ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೂಡಲೆ ಮಾಹಿತಿ ನೀಡಬಹುದಾಗಿದೆ. ಅಗ್ನಿ ಅನಾಹುತಗಳನ್ನು ಎದುರಿಸುವ ವಿಧಾನಗಳ ಬಗ್ಗೆ ಕನಿಷ್ಠ ಅರಿವು ಹೊಂದುವ ಅಗತ್ಯವಿದೆ ಎಂದು ತಿಳಿಸಿದ ಅವರು, ಸಾಮಾನ್ಯ ಅಗ್ನಿ ಅನಾಹುತ, ಅನಿಲಗಳಿಂದ ಉಂಟಾಗುವ ಅನಾಹುತ ಸೇರಿದಂತೆ ವಿವಿಧ ಬಗೆಯ ಅಗ್ನಿ ಅವಘಡಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ತುರ್ತು ಸೇವೆಗಳ ಬಗ್ಗೆ ಕೂಡ ಅರಿವು ಹೊಂದಬೇಕಿದೆ. ಇಂತಹ ಜಾಗೃತಿ ಶಿಬಿರಗಳಲ್ಲಿ ಪಾಲ್ಗೊಂಡು ಜ್ಞಾನವಂತರಾಗಬೇಕಿದೆ. ಆ ಮೂಲಕ ಇತರರಿಗೆ ಮಾಹಿತಿ ಒದಗಿಸುವಂತಾಗಬೇಕಿದೆ ಎಂದರು.
ಮಹಾತ್ಮಾಗಾಂಧಿ ಪದವಿ ಕಾಲೇಜು ಪ್ರಾಂಶುಪಾಲೆ ಟಿ.ಎ.ಲಿಖಿತ ಮಾತನಾಡಿದರು.
ಈ ಸಂದರ್ಭ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಪತ್ರಕರ್ತರ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಕೆ.ಕೆ.ನಾಗರಾಜಶೆಟ್ಟಿ, ಕೆ.ಜೆ.ಶಿವರಾಜ್, ಕುಡೆಕಲ್ ಗಣೇಶ್, ವಿನೋದ್, ಜಯಪ್ರಕಾಶ್, ಭೋಜಣ್ಣ ರೆಡ್ಡಿ ಸೇರಿದಂತೆ ಸಂಸ್ಥೆ ಉಪನ್ಯಾಸ ವೃಂದದವರು ಇದ್ದರು.
ನಂತರ ಶಾಲಾ ಮೈದಾನದಲ್ಲಿ ಬೆಂಕಿ ನಂದಿಸುವ ಕುರಿತ ಪ್ರಾತ್ಯಕ್ಷಿಕೆ ನಡೆಯಿತು.
Back to top button
error: Content is protected !!