ಕ್ರೀಡೆ

ಹುದುಗೂರಿನಲ್ಲಿ ಹೊನಲು ಬೆಳಕಿನ ಕಾಳಿಕಾಂಬ ವಾಲಿಬಾಲ್ ಕಪ್ ಗೆ ಚಾಲನೆ

ಕೂಡಿಗೆ, ಡಿ. 13 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಲೀಗ್ ಮಾದರಿಯ ಹೊನಲು ಬೆಳಕಿನ ಕಾಳಿಕಾಂಬ ವಾಲಿಬಾಲ್ ಕಪ್‌ 2025 ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ.ಜಾಮಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಕರಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕುಶಾಲನಗರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಮೈದಾನ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳ ಆಯೋಜನೆ ಮೂಲಕ ಯುವಕರು ಸಂಘಟಿತರಾಗುವ ಮೂಲಕ ಒಗ್ಗೂಡಿ ಗ್ರಾಮದ ಸರ್ವತೋಮುಖ ಪ್ರಗತಿಗೆ ಶ್ರಮಿಸಲು ಉಪಯುಕ್ತವಾಗಲಿದೆ. ಕ್ರೀಡೆಯು ಸಾಧಕನಿಗೆ ಸ್ಪೂರ್ತಿ ದಾಯಕವಾಗುವುದರ ಜೊತೆಗೆ ಕೌಶಲ್ಯ, ಮನೋಸ್ಥೈರ್ಯ ಮೂಲಕ ಐಕ್ಯತೆಯನ್ನು ಮೂಡಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅತಿಥಿಯಾಗಿದ್ದ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ, ತಾಲ್ಲೂಕು ಕೆ‌ಡಿಪಿ ಸದಸ್ಯ ಟಿ. ಪಿ. ಹಮೀದ್ ಮಾತನಾಡಿ, ಮಾನವೀಯ ಮೌಲ್ಯಗಳ ಜೊತೆಯಲ್ಲಿ ಸೌಹಾರ್ದ ಮನೋಭಾವದ ಸಂಕೇತ ಕ್ರೀಡೆಯಾಗಿರುತ್ತದೆ. ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಇದರ ಮೂಲಕ ಭಾವನಾತ್ಮಕ ಸಂಬಂಧವನ್ನು ಕ್ರೀಡೆಯು ಬೆಳೆಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಐ. ಜಿ.‌ಶರತ್ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಹುದುಗೂರು ಗ್ರಾಮದ ಶೋಭಾ ಪುಟ್ಟಪ್ಪ, ಪ್ರೇಮಲೀಲಾ, ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಮ್ಮ, ಹೆಚ್.ಎಸ್. ರವಿ, ಹುದುಗೂರು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಾಂಚನಾ ದೇವದನ್, ಪಶು ಆಸ್ಪತ್ರೆ ಪಶು ಪರಿವೀಕ್ಷಣಾಧಿಕಾರಿ ಸುಜಾತ, ಸ್ಥಳೀಯ ಅಂಗನವಾಡಿ ಶಿಕ್ಷಕಿ ಸರಸ್ವತಿ, ಮೀನಾಕ್ಷಿ ಮಾದಪ್ಪ, ಸಂಘದ ಉಪಾಧ್ಯಕ್ಷ ಕೆ.ಡಿ. ಕಾರ್ತಿಕ್, ಕಾರ್ಯದರ್ಶಿ ಟಿ. ಎಸ್, ಚಂದ್ರಕಾಂತ, ಖಜಾಂಚಿ ಸಿ.ಎಸ್. ನವೀನ್ ಸೇರಿದಂತೆ ಲೀಗ್ ಪಂದ್ಯಾಟದ 8 ತಂಡಗಳ ಅಟಗಾರರು, ಗ್ರಾಮಸ್ಥರು , ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಯುವಕರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!