ಕುಶಾಲನಗರ ಜಾತ್ರಾ ಮೈದಾನದಲ್ಲಿ ಕಂಬಳ ಕೋಣಗಳನ್ನು ಹತ್ತಿರದಿಂದ ನೋಡುವ ಅವಕಾಶ
ಕುಶಾಲನಗರ, ಅ 13: ಪುತ್ತೂರಿನಿಂದ ಮೈಸೂರು ದಸರಾಗೆ ತೆರಳುವ ಕಂಬಳದ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆಂದು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಪುರಸಭೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಪುರಸಭೆ ಅಧಿಕಾರಿಗಳು
ಕಂಬಳ ಆಚರಣಾ ಸಮಿತಿ, ವಿವಿಧ ಸಂಘಸಂಸ್ಥೆಗಳ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಸಿದ್ದತೆಗಳು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಸಿದ್ದತೆಗಳ ಬಗ್ಗೆ ಮಾಹಿತಿ ಒದಗಿಸಿದರು. ಅ.17 ರಂದು ಮಧ್ಯಾಹ್ನ ಅಂದಾಜು 150 ಜೋಡಿ ಕಂಬಳದ ಕೋಣಗಳು ಕುಶಾಲನಗರಕ್ಕೆ ಆಗಮಿಸಲಿದೆ. ಅವುಗಳಿಗೆ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ವಿಶ್ರಾಂತಿ ಮತ್ತು ಮೇವಿಗೆ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಬರುವ 2000 ಮಂದಿ ಸೇರಿದಂತೆ ಕೋಣಗಳನ್ನು ವೀಕ್ಷಿಸಲು ಆಗಮಿಸುವ ಕುಶಾಲನಗರ ಸುತ್ತಮುತ್ತಲಿನ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕೋಣಗಳನ್ನು ಸ್ವಾಗತಿಸಿ ಬೀಳ್ಕೊಡುವ ನಡುವೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನ ಶಾಸಕದ್ವಯರು ಸೇರಿದಂತೆ ಪುತ್ತೂರು ಕ್ಷೇತ್ರ ಶಾಸಕರು ಪಾಲ್ಗೊಳ್ಳಲಿದ್ದಾರೆ. ಕರಾವಳಿ ವಾದ್ಯಗೋಷ್ಠಿ, ಹುಲಿವೇಷ ಕುಣಿತ ಪ್ರದರ್ಶನ ಕೂಡ ಇರುತ್ತದೆ ಎಂದು ಮಾಹಿತಿ ನೀಡಿದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಮಾತನಾಡಿ, ಕುಶಾಲನಗರ ಭಾಗದ ಜನತೆ
ಪ್ರಸಿದ್ದ ಕಂಬಳ ಕೋಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಶಾಸಕ ಮಂತರ್ ಗೌಡ ಕಲ್ಪಿಸಿದ್ದಾರೆ. ನಾವೂ ಕೂಡ ಕಂಬಳದ ಕೋಣಗಳನ್ನು ಸ್ವಾಗತಿಸಿ ಅಲ್ಲಿನ ಕಲೆಯನ್ನು ಪ್ರೋತ್ಸಾಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಮಂದಿ ಅಂದು ಭಾಗಿಯಾಗಬೇಕಿದೆ. ಕುಶಾಲನಗರದ ಪ್ರಸಿದ್ದ ಗೋಜಾತ್ರೆ ಸಂದರ್ಭ ಕಂಬಳ ಏರ್ಪಡಿಸಿದಲ್ಲಿ ಮತ್ತಷ್ಟು ಮೆರಗು ದೊರೆಯುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ಶಾಸಕರ ಗಮನ ಸೆಳೆಯಬೇಕಿದೆ ಎಂದು ಆಗ್ರಹಿಸಿದರು.
ವಿಶ್ವ ತುಳುವೆರ ಕೂಟದ ಅಧ್ಯಕ್ಷ ಐತಪ್ಪ ರೈ, ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಮಾತನಾಡಿ, ಕುಶಾಲನಗರದಲ್ಲಿ ಕಂಬಳದ ಕೋಣಗಳಿಗೆ ವಿಶ್ರಾಂತಿ ವ್ಯವಸ್ಥೆ, ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ ಶಾಸಕ ಡಾ.ಮಂತರ್ ಗೌಡ ಮತ್ತು ಸ್ಥಳೀಯ ಮುಖಂಡರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮಾಜಿ ಸದಸ್ಯರುಗಳಾದ ಡಿ.ಕೆ.ತಿಮ್ಮಪ್ಪ, ಜಗದೀಶ್, ಸುರಯ್ಯಭಾನು, ತುಳುವರೆ ಕೂಟದ ಪ್ರಕಾಶ್ ಆಚಾರ್ಯ, ಅಪ್ಪು ರವೀಂದ್ರ, ಮೊಗೇರ ಸಂಘದ ದಾಮೋದರ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಮತ್ತಿತರರು ಇದ್ದರು.
Back to top button
error: Content is protected !!