ಕುಶಾಲನಗರ, ಆ 11: ರೈತ ಹೋರಾಟ ಸಮಿತಿ ಕರೆ ನೀಡಿರುವ ಆಗಸ್ಟ್ ೧೨ರ ಸೋಮವಾರಪೇಟೆ ತಾಲ್ಲೂಕು ಬಂದ್ಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ ತಾಲ್ಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್ ತಿಳಿಸಿದ್ದಾರೆ.
ಜೆಡಿಎಸ್ ರೈತರ ಪಕ್ಷವಾಗಿದ್ದು, ರೈತರಿಗೆ ಅನ್ಯಾಯವಾದಾಗ ಎಲ್ಲಾ ಕಾರ್ಯಕರ್ತರು ಹೋರಾಟಕ್ಕೆ ಧುಮುಕುತ್ತೇವೆ. ಕೊಡಗಿನಲ್ಲಿರುವ ಸಿ ಆ್ಯಂಡ್ ಡಿ ಭೂಮಿ ರೈತರ ಕೃಷಿ ಭೂಮಿಯಾಗಿದ್ದು, ಅನೇಕ ವರ್ಷಗಳಿಂದ ಕಾಫಿ ಕಾಳುಮೆಣಸು, ಭತ್ತ, ಏಲಕ್ಕಿ, ತರಕಾರಿ, ಬಾಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಿ ಆ್ಯಂಡ್ ಡಿ ಭೂಮಿ ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಕಂದಾಯ ಇಲಾಖೆಯವರು ಸರಕಾರಕ್ಕೆ ವರದಿ ನೀಡಿರುವುದು ಖಂಡನೀಯವಾದುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಅನ್ನದಾತರೇ ದೇಶದ ಬೆನ್ನೆಲುಬು ಎಂದು ಸರಕಾರಗಳು ಹೇಳುತ್ತವೆ. ಆದರೆ ರೈತವಿರೋಧಿ ಕಾನೂನುಗಳನ್ನು ತರುತ್ತಾರೆ. ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಯಾವುದೇ ಸರಕಾರಗಳು ಬಗೆಹರಿಸಿಲ್ಲ. ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಿದರೆ, ರೈತರು ಬೀದಿಪಾಲಾಗಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ ಎಂದರು.
ರೈತಾಪಿ ವರ್ಗ ಹೋರಾಟದ ಮೂಲಕ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಬೀದಿಗಿಳಿದು ಹೋರಾಟ ಮಾಡಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿರುವ ಕಾರ್ಯಕರ್ತರೆಲ್ಲರೂ ರೈತಾಪಿ ವರ್ಗಕ್ಕೆ ಸೇರಿದ್ದಾರೆ. ಪಕ್ಷಭೇದ ಮರೆತು ರೈತಪರ ಹೋರಾಟದಲ್ಲಿ ಭಾಗವಹಿಸಿ ತಮ್ಮ ಆಸ್ತಿ-ಪಾಸ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
೫ ಗ್ಯಾರೆಂಟಿಗಳನ್ನು ಕೊಟ್ಟು ರಾಜ್ಯ ಸರಕಾರ ದಿವಾಳಿಯಾಗಿದೆ. ಈಗ ಪೈಸಾರಿ ಜಾಗವನ್ನು ಮಾಲಿಕರಿಗೆ ಗುತ್ತಿಗೆ ಕೊಟ್ಟು ಹಣ ಪಡೆದು ಖಜಾನೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪೈಸಾರಿ ಹಾಗೂ ಸಿ ಆ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಹೆಚ್.ಡಿ.ಪ್ರವೀಣ್ ಮಾತನಾಡಿ,
ಸಮಿತಿ ಕರೆ ನೀಡಿರುವ ನಾಳಿನ ಬಂದ್ ನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಕೊಡಗಿನಲ್ಲಿ ಕೃಷಿಗೆ ಯೋಗ್ಯವಾದ ಭೂಮಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಜನರ ಜೀವನಾಡಿಯಾದ ರೈತಾಪಿ ವರ್ಗಕ್ಕೆ ಬೆಂಬಲ ಸೂಚಿಸುವುದು ಎಲ್ಲರ ಕರ್ತವ್ಯ. ಇಂದಿನ ಯುವ ರೈತ ಸಮೂಹ ಎಲ್ಲವನ್ನು ಗಮನಿಸುತ್ತಿದೆ. ಹಿಂದಿನ ರಾಜಕಾರಣಿಗಳ, ಕೆಲವು ಅಧಿಕಾರಿಗಳ ಎಡವಟ್ಟಿನಿಂದ ಈ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳು ಪಕ್ಷ ಬೇಧ ಮರೆತು ಇತ್ತ ಗಮನಹರಿಸಬೇಕಿದೆ. ಐ.ಎ.ಎಸ್, ಐ.ಎಫ್.ಎಸ್ ಅಧಿಕಾರಿ ವರ್ಗ ರೈತರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಕ್ರೋಡೀಕರಿಸಿ ಬಾಧಕಗಳ ಕುರಿತು ಸಂಬಂಧಿಸಿದವರ ಗಮನ ಸೆಳೆಯಬೇಕಿದೆ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ವಿಜೇಶ್, ಜಯಾನಂದ, ನವೀನ್ ಇದ್ದರು.
Back to top button
error: Content is protected !!