ಕುಶಾಲನಗರ, ಜು 28: ಗುಡ್ಡೆಹೊಸೂರು ಗ್ರಾಪಂ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷೆ ಸೌಮ್ಯ ಭರತ್ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕಾವೇರಿ ನದಿಗೆ ಕಲುಷಿತ ನೀರು ಹರಿಸುತ್ತಿರುವ ಹೋಟೆಲ್ ಬಾರ್ ಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲು ಸದಸ್ಯ ಶಿವಪ್ಪ ಒತ್ತಾಯಿಸಿದರು. ಹಲವು ಬಾರಿ ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರೂ ಇದುವರೆಗೆ ಕ್ರಮವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಇತರೆ ಸದಸ್ಯರುಗಳು ನದಿ ಕಲುಷಿತಗೊಳಿಸುತ್ತಿರುವ ಕೇಂದ್ರಗಳ ವಿರುದ್ದ ಕೂಡಲ ಸೂಕ್ತ ಕ್ರಮವಹಿಸಲು ಅಧ್ಯಕ್ಷರು, ಪಿಡಿಒ ಅವರನ್ನು ಆಗ್ರಹಿಸಿದರು. ಅಂತಹವರ ವಿರುದ್ದ ಪ್ರಕರಣ ದಾಖಲಿಸಲು ಕ್ರಮವಹಿಸುವುದಾಗಿ ಪಿಡಿಒ ಸುಮೇಶ್ ತಿಳಿಸಿದರು.
ಕಂದಾಯ, ತೆರಿಗೆ ವಸೂಲಾತಿ ಕಾರ್ಯ ಕಾಲಕಾಲಕ್ಕೆ ಸಮರ್ಪಕವಾಗಿ ಕೈಗೊಳ್ಳುವಂತೆ ಸದಸ್ಯ ಪ್ರದೀಪ್ ಸಭೆಯನ್ನು ಆಗ್ರಹಿಸಿದರು. ಗ್ರಾಪಂನಲ್ಲಿ ಒಬ್ಬನೇ ಪೌರಕಾರ್ಮಿಕ ಇರುವ ಕಾರಣ ಸ್ವಚ್ಚತಾ ಕಾರ್ಯ ಕುಂಠಿತಗೊಂಡಿದೆ. ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಿ ಅಥವಾ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಶೀಘ್ರದಲ್ಲೇ ಕ್ರಮವಹಿಸಬೇಕಿದೆ ಎಂದು ಸದಸ್ಯರಾದ ಪ್ರದೀಪ್, ಶಿವಪ್ಪ, ರುಕ್ಮಿಣಿ, ಉಷಾ, ಚಿದಾನಂದ ಅವರು ಒತ್ತಾಯಿಸಿದರು. ತ್ಯಾಜ್ಯ ನಿರ್ವಹಣೆ ವಿಚಾರದ ಕುರಿತು ಗಂಭೀರ ಚರ್ಚೆ ನಡೆಯಿತು. ನೇಮಕಾತಿಗೆ ಇರುವ ಸರಕಾರದ ಮಾನದಂಡಗಳ ಬಗ್ಗೆ ಪಿಡಿಒ ಸಭೆಗೆ ಮಾಹಿತಿ ಒದಗಿಸಿದರು.
ಗ್ರಾಪಂ ವ್ಯಾಪ್ತಿಯ ಅಂಗಡಿ, ಮಳಿಗೆಗಳಲ್ಲಿ ಸರಕಾರದ ಮಾನದಂಡದಂತೆ ಕನ್ನಡ ಭಾಷೆ ಕಡ್ಡಾಯ ಬಳಕೆ, ಪರವಾನಗಿ ನವೀಕರಣ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವುದು, ಜಮಾ ಖರ್ಚು ಗಳ ಕುರಿತು ಚರ್ಚೆಗಳು ನಡೆಯಿತು. ಅಪಾಯಕಾರಿ ನರಗಳೆ ತೆರವಿಗೆ ಕ್ರಮವಹಿಸಲು ಸದಸ್ಯರು ಆಗ್ರಹಿಸಿದರು. ಮಳೆಹಾನಿ ಪ್ರಕರಣಗಳು, ತೆರಿಗೆ ಸಂಗ್ರಹಾತಿ, 9/11 ಪರಿಷ್ಕರಣೆ, ಸಾರ್ವಜನಿಕ ಅರ್ಜಿಗಳ ಕುರಿತು ಪಿಡಿಒ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಎಂ.ಕೆ. ಸೇರಿದಂತೆ ಸದಸ್ಯರುಗಳು ಇದ್ದರು.
Back to top button
error: Content is protected !!