ಕ್ರೈಂ

ಚಿಕ್ಕ ಅಳುವಾರ ಗ್ರಾಮದ ತರಕಾರಿ ವ್ಯಾಪಾರಿಯಿಂದ 1.49 ಲಕ್ಷ ರೂ. ಸುಲಿಗೆ: ಪೊಲೀಸರೆಂದು ಬೆದರಿಸಿ ಹಣ ವಸೂಲಿ ಆರೋಪ

ಕುಶಾಲನಗರ, ಜೂ 24: ಸುವರ್ಣ ಗೆಡ್ಡೆ ಮಾರಾಟ ಮಾಡುವುದಾಗಿ ತರಕಾರಿ ವ್ಯಾಪಾರಿಯೊಬ್ಬರನ್ನು ಕರೆದು ಬಳಿಕ ತಾವು ಪೊಲೀಸರು ಎಂದು ಬೆದರಿಸಿ 1.49 ಲಕ್ಷ ರೂ. ಪಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು ಜಿಲ್ಲೆಕುಶಾಲನಗರ ಹೋಬಳಿ ಚಿಕ್ಕಅಳುವಾರ ಗ್ರಾಮದ ಸುನೀಲ್‌ ವಂಚನೆಗೆ ಒಳಗಾದವರು. ಇವರು ವ್ಯವಸಾಯದ ಜತೆಗೆ ಅದೇ ಗ್ರಾಮದ ಕೃತ್ವಿಕ್‌ ಎಂಬುವವರ ಜತೆ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಇವರಿಗೆ ಜೂ.21ರಂದು ಸಂಜೆ ಸುಮಾರು 5ರ ಸಮಯದಲ್ಲಿ ವ್ಯಕ್ತಿಯೊಬ್ಬರು ಕರೆಮಾಡಿ ಸುವರ್ಣ ಗೆಡ್ಡೆ ಮಾರಾಟ ಮಾಡುತ್ತಿದ್ದು ಹೊಳೆನರಸೀಪುರಕ್ಕೆ ಬಂದು ಖರೀದಿಸಲು ತಿಳಿಸಿದರು. ಅಲ್ಲಿಗೆ ಹೋದ ಬಳಿಕ ಮೂವರು ಪೊಲೀಸರೆಂದು ಹೇಳಿ ಹಣ ಸುಲಿಗೆ ಮಾಡಿದ್ದಾರೆ ಎಂದು ಸುನಿಲ್‌ ದೂರಿನಲ್ಲಿ ತಿಳಿಸಿದ್ದಾರೆ.
ಏನಿದು ದೂರು: ‘‘ಜೂ.22ರಂದು ಬೆಳಗ್ಗೆ ಕಾರಿನಲ್ಲಿ ಹೊಳೆನರಸೀಪುರಕ್ಕೆ ಬಂದು ಫೋನ್‌ ಮಾಡಿದಾಗ ನಮ್ಮ ಕೆಲಸದಾತ ನಾಗ ಎಂಬಾತ ಫ್ಲೈಓವರ್‌ ಬಳಿ ಇರುತ್ತಾನೆ ಎಂದು ಆರೋಪಿಗಳು ತಿಳಿಸಿದ್ದರು. ಅಲ್ಲಿಆತ ನಮ್ಮ ಕಾರನ್ನು ಏರಿ ತೋಟಕ್ಕೆ ಕರೆದುಕೊಂಡು ಹೋಗುವುದಾಗಿ ಚನ್ನರಾಯಪಟ್ಟಣದ ರಸ್ತೆಯಲ್ಲಿ ಸುಮಾರು 1 ಕಿಮೀ ಕರೆದುಕೊಂಡು ಬಂದು ರಸ್ತೆ ಪಕ್ಕದ ಖಾಲಿ ಜಮೀನಿನ ಬಳಿ ಕಾರನ್ನು ನಿಲ್ಲಿಸಲು ತಿಳಿಸಿದ. ಅಷ್ಟರಲ್ಲಿ ಹಿಂದೆಯೆ ಇನ್ನೊಂದು ಕಾರು ಹಿಂಬಲಿಸಿ ಬಂದು ಅಲ್ಲಿದ್ದ ಒಬ್ಬ ವ್ಯಕ್ತಿ ಮೊಬೈಲ್‌ ಮತ್ತು ಕಾರಿನ ಕೀ ಕಿತ್ತುಕೊಂಡು ನಾವು ಪೊಲೀಸರು ಎಂದು ಹೇಳಿದ್ದು, ಒಟ್ಟು ಮೂವರು ಸೇರಿಕೊಂಡು ನನ್ನನ್ನು, ಕೃತ್ವಿಕ್‌ ಹಾಗೂ ನಾಗ ಎಂಬುವವನನ್ನು ಬಲವಂತವಾಗಿ ಅವರ ಕಾರಿನಲ್ಲಿ ಹತ್ತಿಸಿಕೊಂಡರು. ರಸ್ತೆ ಮಧ್ಯೆ ನಾಗ ಎಂಬುವವನ ಹತ್ತಿರ ಇದ್ದ ಬ್ಯಾಗ್‌ ತೆಗೆದು ಅದರಲ್ಲಿದ್ದ ವೈಟ್‌ ಪೌಡರ್‌ ತೋರಿಸಿ, ‘‘ಇದು ಡ್ರಗ್ಸ್‌ ಆಗಿದ್ದು, ನೀವು ಒಂದೇ ಗುಂಪಿನವರು. ನಿಮ್ಮನ್ನು ಜೈಲಿಗೆ ಹಾಕುವುದಾಗಿ ಹೆದರಿಸಿದರು. ನಿಮ್ಮನ್ನು ಬಿಡಬೇಕು ಎಂದರೆ 4 ಲಕ್ಷ ರೂ. ಈಗಲೇ ನೀಡಬೇಕು ಎಂದು ಹೆದರಿಸಿದರು. ಕೃತ್ವಿಕ್‌ನನ್ನು ಹಿರೀಸಾವೆಯ ಒಂದು ಚಿಲ್ಲರೆ ಅಂಗಡಿ ಹತ್ತಿರ ಕರೆದುಕೊಂಡು ಹೋಗಿ ಅದರ ಮಾಲೀಕ ನಾಗೇಶ್‌ ಎಂಬುವವರಿಗೆ ಆಸ್ಪತ್ರೆಗೆ ತುರ್ತಾಗಿ ಹಣ ನೀಡಬೇಕು ಎಂದು ಆತನ ಮೊಬೈಲ್‌ನಿಂದ 50 ಸಾವಿರ ರೂ. ಅನ್ನು ಫೋನ್‌ ಪೇ ಮಾಡಿಸಿಕೊಂಡರು. ನಾನು ಸ್ನೇಹಿತರಾದ ಗಣೇಶ್‌ ಮತ್ತು ಮೋಹನ್‌ ಅವರಿಂದ 99 ಸಾವಿರ ರೂ .ಫೋನ್‌ ಪೇ ಮಾಡಿಸಿಕೊಂಡಿದ್ದು, ಒಟ್ಟು 1.49 ಲಕ್ಷ ರೂ. ಹಣವನ್ನು ಪಡೆದು ಹೊಳೆನರಸೀಪುರದಲ್ಲಿ ಬಿಟ್ಟು ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಹೆದರಿಸಿ ಹೊರಟು ಹೋದರು,’’ ಎಂದು ಸುನೀಲ್‌ ದೂರು ನೀಡಿದ್ದಾರೆ.
ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!