ಕುಶಾಲನಗರ, ಏ 10:ಸರಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಆಗಿದ್ದ ಪಿ.ಎಸ್.ಮಹೇಶ್ ಸೇರಿದಂತೆ ಮೂವರ ವಿರುದ್ದ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಮಹೇಶ್ ಎಂಬವರ ಪತ್ನಿ ಹೆಸರಿಗೆ 2018-19 ರಲ್ಲಿ 94ಸಿಸಿ ಅಡಿಯಲ್ಲಿ 30*40 ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಿರುವ ಆರೋಪ ಹಾಗೂ ಸದರಿ 30*40 ಅಳತೆಯ ನಿವೇಶನವನ್ನು 55*48 ಎಂದು ತಿದ್ದುಪಡಿ ಮಾಡಿ 9/11 ಮತ್ತು ಫಾರಂ 3 ಪಡೆದಿರುವ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ಪುರಸಭೆ, ತಹಸೀಲ್ದಾರ್ ಕಛೇರಿ ಹಾಗೂ ಆರೋಪಿತರ ನಿವಾಸಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿ ದಾಖಲೆ ಪರಿಶೀಲಿಸಿ ವಶಪಡಿಸಿಕೊಂಡು ಭ್ರಷ್ಟಾಚಾರ ನಿಷೇದ ನಿಯಮ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.