ಕುಶಾಲನಗರ, ಜ 20: ವಾರಂತ್ಯದಲ್ಲಿ ಕೊಡಗಿನ ನಿಸರ್ಗಧಾಮಕ್ಕೆ ಲಗ್ಗೆ ಇಟ್ಟ ಪ್ರವಾಸಿಗರ ಗುಂಪುಗಳು ಬಿಡದೆಯೇ ಅತ್ತಕಡೆ ನೋಡುತ್ತ, ನಿಂತು ಗಮನಿಸುತ್ತ, ವನರಾಶಿಯ ನಡುವೆ ವಿನೂತನ ಪ್ರಯೋಗದಲ್ಲಿ ತೊಡಗಿದ್ದ ಚಿಣ್ಣರು ಹಾಗೂ ಹಿರಿಯರ ಬಗ್ಗೆ ಹೆಮ್ಮೆಯ ನೋಟ ಬೀರುತ್ತಿದ್ದವು. ಮೈಸೂರಿನ ವಿ ಕೇರ್ ಸಂಸ್ಥೆಯ ವತಿಯಿಂದ ಕೊಡಗಿನೆಡೆಗೆ ಪ್ರವಾಸಕ್ಕೆ ಬಂದ ಮಕ್ಕಳು ಹಾಗೂ ಸಾಹಿತ್ಯಾಸಕ್ತ ಹಿರಿಯರು ಬೇರೆ ಪ್ರವಾಸಿಗರಂತಿರದೆ ಅಲ್ಲೊಂದು ಪುಸ್ತಕ ಓದುವ, ಹಾಡುವ, ನರ್ತಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಇಂದಿನ ಸಮಾಜದಲ್ಲಿ ಪುಸ್ತಕದ ಓದಿನ ಪ್ರಸ್ತುತತೆಯನ್ನು, ಮಹತ್ವವನ್ನು ತಿಳಿಸುವ ಕಾರ್ಯಕ್ರಮವಾಗಿತ್ತದು. ಸತತ ಪುಸ್ತಕ ಓದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದ ಮಕ್ಕಳನ್ನು ಉತ್ತೇಜಿಸಲು ವಿಕೇರ್ ಸಂಸ್ಥೆಯು ಈ ಬಾರಿ ನಿಸರ್ಗಧಾಮಕ್ಕೆ ಉಚಿತ ಪ್ರವಾಸದೊಂದಿಗೆ ” ಪ್ರಕೃತಿಯಲ್ಲಿ ಪುಸ್ತಕ ಓದು” ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಕೊಡಗಿನ ಹಿರಿಯ ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ರವರು ಮಕ್ಕಳ ಬೆಳವಣಿಗೆಯಲ್ಲಿ ಶ್ರದ್ದೆ ಪರಿಶ್ರಮ ಹಾಗೂ ಸತತವಾಗಿ ಗುರಿಯ ಬೆನ್ನು ಹತ್ತುವ ಮಹತ್ವದ ಬಗ್ಗೆ ಕಥೆಗಳ ಮೂಲಕ ಮಕ್ಕಳನ್ನು ಒಳಗೊಳ್ಳುವಂತೆ ಮಾಡಿ ಮಾತನಾಡಿದರು. ತಾಂತ್ರಿಕ ಯುಗದಲ್ಲಿ ಪುಸ್ತಕ ಓದು ಅತ್ಯಂತ ದುಸ್ತರವಾಗಿರುವ ಹೊತ್ತಿನಲ್ಲಿ ಎಳೆಯ ತಲೆಮಾರಿನ ನಡುವೆ ಅದನ್ನು ಹವ್ಯಾಸವನ್ನಾಗಿಸುವ ವೀ ಕೇರ್ ಸಂಸ್ಥೆಯ ಪ್ರಯತ್ನ ನಿಜಕ್ಕೂ ಆಶಾದಾಯಕ ಮತ್ತು ಅತ್ಯುತ್ತಮ ಕಾಯಕವಾಗಿದೆ. ಈ ಕಾರ್ಯದ ಮೂಲಕ ಮುಂದೆ ಸ್ವಸ್ಥ ಸಮಾಜವೊಂದನ್ನು ಕಟ್ಟಬಹುದಾಗಿದೆ ಎಂದು ಅಭಿನಂದಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವೀ ಕೇರ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕುಮುದಿನಿ ಯವರು ” ಸಂಸ್ಥೆಯು ಕಳೆದ 12 ವರ್ಷಗಳಿಂದ ಸಮಾಜ ಕಾರ್ಯ ಅಧ್ಯಯನಗಳ ಮೂಲಕ ಮಕ್ಕಳ ಮತ್ತು ಮಹಿಳೆಯರ ಅಗತ್ಯತೆಗಳನ್ನು ಕಂಡುಕೊಂಡು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕೆಳ ಸ್ಥರದಲ್ಲಿರುವವರ ಬೆಳವಣಿಗೆಗೆ ಅನುಕೂಲಕರವಾದಂತಹ, ಬೌದ್ಧಿಕ ಹಾಗೂ ಸಾಂಸ್ಕೃತಿಕ ವಾತಾವರಣ ಒದಗಿಸಲು ಅವರಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ತುಂಬಲು ಅನುಕೂಲಕರವಾದ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದೆ. ಓದು ಮತ್ತು ಬರಹ ಬದುಕಿನಲ್ಲಿ ಮೌಲ್ಯಗಳನ್ನು ಹಾಗೂ ಭಾವನೆಗಳನ್ನು ತುಂಬುವ ಆಗರಗಳಾಗಿವೆ. ಇಂದು ಯುವ ಸಮಾಜ ಎಲ್ಲದಕ್ಕೂ ಮೊಬೈಲ್ ಮತ್ತು ಟಿವಿಗಳನ್ನು ಆಶ್ರಯಿಸಿ, ಸುಲಭ ಮಾರ್ಗದಲ್ಲಿ ಬದುಕಲು ಹೊರಟು, ಮೌಲ್ಯ ರಹಿತ ಜೀವನ ನಡೆಸುವಂತಾಗಿದೆ. ಇದರಿಂದಾಗಿ ಮಾನಸಿಕ ಸಾಮಾಜಿಕ ದೈಹಿಕ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಅನೇಕ ಯುವಕರು ತಮ್ಮ ವೈಯಕ್ತಿಕ ಹಾಗೂ ಸಾಂಸಾರಿಕ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಎಳೆಯರಲ್ಲಾದರೂ ನಿಜವಾದ ಜ್ಞಾನ ಹಾಗೂ ಮೌಲ್ಯಗಳನ್ನು ಬಿತ್ತರಿಸುವ ಪುಸ್ತಕ ಓದಿನ ಹವ್ಯಾಸವನ್ನು ಮೈಗೂಡಿಸುವಂತೆ ಮಾಡಲು ನಮ್ಮ ಸಂಸ್ಥೆ ಶ್ರಮ ವಹಿಸುತ್ತಿದೆ. ಸಮಾಜದ ಎಲ್ಲಾ ಸ್ಥರದ ಹಿರಿಯರು ಈ ಕಾರ್ಯಕ್ರಮಕ್ಕೆ ಕೈಜೋಡಿಸುವ ಅಗತ್ಯವಿದೆ. ಇಂದು ಪ್ರಕೃತಿಯಲ್ಲಿ ಪುಸ್ತಕ ಓದು ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಎಸಿಎಫ್ ಅರಣ್ಯಾಧಿಕಾರಿ ಶ್ರೀ ಲಕ್ಷ್ಮಿಕಾಂತ ಎನ್, ನಿಸರ್ಗಧಾಮದ ಅಧಿಕಾರಿಗಳು ಹಾಗೂ ಸಂಪನ್ನಗೊಳಿಸಿದ ಎಲ್ಲರಿಗೂ ಆಭಾರಿಗಳಾಗಿದ್ದೇವೆ “ಎಂದು ಹೇಳಿದರು.
ಕುಶಾಲನಗರ ಪದವಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಡಾಕ್ಟರ್ ದೇವರಾಜ್ ರವರು ಭಾಷೆಯ ಮಹತ್ವ ಓದಿನ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು. “ವ್ಯಕ್ತಿಗಳು ಸ್ಥಳಗಳು ಹಾಗೂ ಪುಸ್ತಕಗಳು ನಮ್ಮ ಬದುಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿವೆ. ನನ್ನ ಹರೆಯದ ದಿನಗಳಲ್ಲಿ ಓದಿದ್ದ ಒಂದು ಸಣ್ಣ ಪುಸ್ತಕ ನನ್ನಲ್ಲಿ ಅಧ್ಯಯನದ ಜಿಜ್ಞಾಸೆಯನ್ನು ಹುಟ್ಟಿಸಿತ್ತು. ಆ ಪುಸ್ತಕಕ್ಕೆ ನನ್ನ ಎದೆಯಲ್ಲಿ ಎತ್ತರದ ಸ್ಥಾನವಿದೆ. ನಾವೆಲ್ಲರೂ ಮತ್ತೆ ಮತ್ತೆ ಭೇಟಿಯಾಗುವುದರಲ್ಲೂ ಒಂದು ಸಕಾರಣವಿದೆ. ಉತ್ತಮ ಯೋಚನೆ ಇರುವ ವ್ಯಕ್ತಿಗಳು ಒಂದಾದಲ್ಲಿ ಸಮಾಜವನ್ನು ಕಾಡುವ ಕಾಯಿದೆಗಳಿಗೆ ಔಷಧಿಯನ್ನು ಕಂಡುಕೊಳ್ಳಬಹುದಾಗಿದೆ. ಮಕ್ಕಳು ಈ ನಿಟ್ಟಿನಲ್ಲಿ ಪುಸ್ತಕ ಓದುತ್ತಿರುವುದು ನಮ್ಮ ನೆಲ ಸಂಸ್ಕೃತಿ ಹಾಗೂ ಭಾಷೆಯನ್ನು ತಿಳಿಯುತ್ತಿರುವುದು ಸ್ತುತ್ಯಾರ್ಹ” ಎಂದರು. ವೀ – ಕೇರ್ ಸಂಸ್ಥೆಯ ಧರ್ಮದರ್ಶಿಗಳಲ್ಲೊಬ್ಬರಾದ ಶ್ರೀ ರವಿ ಬಳೆ ರವರು ಪ್ರಕೃತಿಯನ್ನು ಕಣ್ತುಂಬಿಕೊಳ್ಳುವುದು ಹಾಗೂ ಅದರ ಮಡಿಲಲ್ಲಿ ಶಾಂತವಾಗಿ ಇರುವುದರ ಮಹತ್ವದ ಬಗ್ಗೆ ಮಕ್ಕಳೊಡನೆ ಮಾತನಾಡಿದರು. ಪುಸ್ತಕ ಓದು ಕಾರ್ಯಕ್ರಮದ ಭಾಗವಾಗಿ ತೇಜಸ್ವಿಯವರ ಪಾಕಕ್ರಾಂತಿ ಪುಸ್ತಕದ ಆಯ್ದ ಭಾಗವನ್ನು ಒಡನಾಡಿಯ ಸ್ಟ್ಯಾನ್ಲಿ ರವರು ವಾಚಿಸಿದರು. ಕುವೆಂಪುರವರ ಮಕ್ಕಳ ನಾಟಕ “ಬೊಮ್ಮನಹಳ್ಳಿಯ ಕಿಂದರಿ ಜೋಗಿ ” ಯನ್ನು ಮಕ್ಕಳು ನೆರೆದವರ ಮುಂದೆ ರೂಪಕದ ರೀತಿಯಲ್ಲಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಸೋಮವಾರಪೇಟೆಯ ಲಾರೆನ್ಸ್, ಮಾಜಿ ಸೈನಿಕರಾದ ಅಶೋಕ್ ,ವಿವೇಕಾನಂದ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷರಾದ ಶಂಭುಲಿಂಗಪ್ಪ, ಪಿರಿಯಾಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆಶಾ ಮಹಾದೇವ್ ,ಮಹೇಶ್ ಕಣಿವೆ, ಪತ್ರಕರ್ತರಾದ ನವೀನ್ ಕುಮಾರ್ ಪಿರಿಯಾಪಟ್ಟಣ, ವಿ ಕೇರ್ ಕಾರ್ಯಕರ್ತೆ ಸಿಂಚನ, ಶಿವರಂಜಿನಿ ಮತ್ತಿತರರು ಸಹಭಾಗಿಗಳಾಗಿ ಪ್ರಕೃತಿಯಲ್ಲಿ ಪುಸ್ತಕ ಓದು ಹಾಗೂ ಮಕ್ಕಳ ಪ್ರವಾಸ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
Back to top button
error: Content is protected !!