ಪ್ರತಿಭಟನೆ

ಕಾಂಗ್ರೆಸ್ ಸರಕಾರದಿಂದ ರೈತ ವಿರೋಧಿ‌ ನೀತಿ ಅನುಸರಣೆ ಆರೋಪಿಸಿ ಬಿಜೆಪಿ ಪ್ರತಿಭಟನೆ

ಬಿಜೆಪಿ ಸರಕಾರದ ಯೋಜನೆಗಳ ರದ್ದತಿಗೆ ಆಕ್ರೋಷ

ಕುಶಾಲನಗರ, ಸೆ 12:
ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲೆಯ ನೂತನ ವಿಶ್ವವಿದ್ಯಾಲಯ ರದ್ದುಗೊಳಿಸುವ ಹುನ್ನಾರ ವಿರೋಧಿಸಿ ಬಿಜೆಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಶಾಲನಗರದ ಗಣಪತಿ ದೇವಸ್ಥಾನದಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ಕಾಂಗ್ರೆಸ್ ಸರಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಲಾಯಿತು.
ತಹಸೀಲ್ದಾರ್ ಕಛೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಘೋಷಣೆ ಮೂಲಕ ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ, ಮಡಿಕೇರಿ ಕ್ಷೇತ್ರ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಜೆಪಿ ಜಾರಿಗೊಳಿಸಿದ್ದ ರೈತಪರ, ವಿದ್ಯಾರ್ಥಿಗಳ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ರದ್ದುಗೊಳಿಸಿದೆ. ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂಸಿರಿ ಯೋಜನೆ, ಶ್ರಮಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ಮತ್ತಿತರ ಜನಪರ, ರೈತಪರ ಯೋಜನೆಗಳನ್ನು ರದ್ದು ಮಾಡಿ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಬಿಟ್ಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ, ದೇಶ ಹಾಗೂ ರಾಜ್ಯದ ಆರ್ಥಿಕತೆ ಅಧಃಪತನಕ್ಕೆ ಕೊಂಡೊಯ್ಯುತ್ತಿದ್ದಾರೆ. ಇದುವರೆಗೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಬಿಜೆಪಿ ಜಾರಿಗೆ ತಂದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳು ರಾಜ್ಯದ ಜನತೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಆರೋಪಿಸಿದರು.
ನೂತನ ವಿವಿಗಳ ರದ್ದತಿ ಯೋಜನೆ ಕೈಬಿಡಬೇಕಿದೆ. ಹೊಸ ವಿವಿಗಳ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ಒದಗಿಸಲು ಸರಕಾರ ಮುಂದಾಗಬೇಕಿದೆ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ,‌ ಮಂಗಳೂರು ಪ್ರಭಾರಿ ಬಿ.ಬಿ.ಭಾರತೀಶ್ ಮಾತನಾಡಿ, ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ಕೊಡುವ ಯೋಜನೆಯನ್ನು ಕಾಂಗ್ರೆಸ್ ಕೈಗೊಂಡಿದೆ. ಸರಕಾರಕ್ಕೆ ನೂರು ದಿನ ತುಂಬಿದರೂ ಕೂಡ ರಸ್ತೆ ಗುಂಡಿ ಮುಚ್ಚುವ ಕಾರ್ಯ‌ ಕೂಡ ಇದುವರೆಗೆ ಆರಂಭಿಸಿಲ್ಲ. ಸಮಚಿತ್ತದ ಯೋಜನೆಗಳನ್ನು ಜಾರಿಗೊಳಿಸಬೇಕು ಹೊರತು ಉಚಿತ ಯೋಜನೆಗಳ ಸಾಕಾರಕ್ಕೆ‌ ಬಿಜೆಪಿ ಜಾರಿಗೆ ತಂದಿದ್ದ ರೈತಪರ ಯೋಜನೆಗಳನ್ನು ಕಡಿತಗೊಳಿಸಲಾಗಿದೆ. ಬರಪೀಡಿತ ಜಿಲ್ಲೆ ಘೋಷಣೆಗೆ ಸರಕಾರ ಮುಂದಾಗಬೇಕಿದೆ.ಆ ಮೂಲಕ ಅಗತ್ಯ ಆರ್ಥಿಕ ನೆರವು ಒದಗಿಸಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕುಮಾರಪ್ಪ, ಎಂ.ವಿ.ನಾರಾಯಣ, ಜಿ.ಎಲ್.ನಾಗರಾಜು,ಗಣಿಪ್ರಸಾದ್, ಕೃಷ್ಣಪ್ಪ, ಗೌತಮ್, ಉಮಾಶಂಕರ್,ಕೆ.ಜಿ.ಮನು,ಜಯವರ್ಧನ್,ಗಣಪತಿ,ವರದ ಚಂದ್ರಶೇಖರ್,ನವನೀತ್,ರಾಮನಾಥನ್,ಬೋಸ್ ಮೊಣ್ಣಪ್ಪ,ಚರಣ್,ರೂಪ, ವೇದಾವತಿ, ರುಕ್ಮಿಣಿ,ಶೋಭಾ ಪ್ರಕಾಶ್, ಬನಶಂಕರಿ, ಭಾಸ್ಕರ್ ನಾಯಕ್,ಪ್ರವೀಣ್,ನಿತ್ಯಾನಂದ,ರವಿ, ದೇವರಾಜ್, ಮಹೇಶ್, ಮಣಿಕಂಠ,ಮೂಡ್ಲಿ ಗೌಡ ಚಂದ್ರು,ದಿನೇಶ್,ಪಟ್ಟು,ಚಿದಾನಂದ,ಸುಶೀಲ್,ಪ್ರದೀಪ್,ಡೈಮಂಡ್ ಮಣಿ,ಪುಂಡರಿಕಾಕ್ಷ,ಪ್ರವೀಣ್,ರಮೇಶ್,ವೈಶಾಕ್,ಆದರ್ಶ, ಸೋಮಣ್ಣ ಮತ್ತಿತರರು ಇದ್ದರು.
ಇದೇ ಸಂದರ್ಭ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!