ಕಾರ್ಯಕ್ರಮ

ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಮತ್ತು ಗುರುನಮನ ಕಾರ್ಯಕ್ರಮ

ಕುಶಾಲನಗರ, ಡಿ 01: ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 2023-24ನೇ ಸಾಲಿನ ವಾರ್ಷಿಕೋತ್ಸವ ಮತ್ತು ಗುರು ನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸಮಾಜದ ಅಧ್ಯಕ್ಷ ಎಸ್.ಸುಧೀರ್ ಅಧ್ಯಕ್ಷತೆಯಲ್ಲಿ ಬೆಳಗ್ಗೆ ಭವ್ಯ ಶೋಭಾಯಾತ್ರೆ ನಡೆಯಿತು.
ಅಲಂಕೃತ ತೆರೆದ ಮಂಟಪದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮತ್ತು ಕೋಟಿ ಚೆನ್ನಯ್ಯರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಬೈಚನಹಳ್ಳಿ ಮಾರಮ್ಮ ದೇವಾಲಯ‌ ಬಳಿಯಿಂದ ಪ್ರಮುಖ ಬೀದಿಗಳಲ್ಲಿ ಚಂಡೆವಾದ್ಯದೊಂದಿಗೆ ಸಮಾಜ ಬಾಂಧವರು ಮೆರವಣಿಗೆ ನಡೆಸಿದರು.
ಸಾಂಪ್ರದಾಯಿಕ ಶೈಲಿಯ ಉಡುಗೆ ತೊಡುಗೆ,
ಶ್ರೀ ಗಣಪತಿ ದೇವಾಲಯದ ‌ಮುಂಭಾಗ ಸಮುದಾಯ ಬಾಂಧವರ ಮಕ್ಕಳಿಂದ ನಡೆದ ಭಜನಾ ನೃತ್ಯ ಗಮ‌ನ ಸೆಳೆಯಿತು.
ಎಪಿಸಿಎಂಎಸ್ ಸಭಾಂಗಣದವರೆಗೆ ಸಾಗಿದ ಮೆರವಣಿಗೆ ಸಮಾಪ್ತಿಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಹಿಂದೂ ಮುಖಂಡ, ಶ್ರೀ ಗುರು ನಾರಾಯಣ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಶ್ರೀ ನಾರಾಯಣಗರುಗಳ ಸಂದೇಶ ಶಾಂತಿ, ನೆಮ್ಮದಿಯ ಸಮಾಜಕ್ಕೆ ಅನಿವಾರ್ಯ ಎಂಬುದನ್ನು ಮತ್ತೆ ಜಗತ್ತಿಗೆ ನೆನಪಿಸುವ ಕಾರ್ಯ, ಬಿಲ್ಲವ, ಈಡಿಗ ಮುಂತಾದ 26 ಪಂಗಡಗಳುಳ್ಳ ರಾಜ್ಯದ 5ನೇ ದೊಡ್ಡ ಸಮುದಾಯಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವುದು,
ಪ್ರವರ್ಗ 2ಎ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು, ಸಮಾಜದ ಅಭಿವೃದ್ದಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು ಎಂದು ಆಗ್ರಹಿಸುವ ಕಾರ್ಯಕ್ಕೆ ಶ್ರೀ ಗುರು ನಾರಾಯಣ ವಿಚಾರ ವೇದಿಕೆ ಇಡೀ ರಾಜ್ಯದಲ್ಲಿ ಕಾರ್ಯಪ್ರವೃತವಾಗಿದೆ.
ಈ ನಿಟ್ಟಿನಲ್ಲಿ ಕಳೆದೆರೆಡು ವರ್ಷಗಳಿಂದ ರಾಜ್ಯದಲ್ಲಿ ನಿರಂತರವಾಗಿ ಸಂಘಟನಾ ಕಾರ್ಯ ನಡೆಯುತ್ತಿದ್ದು, ಕೊಡಗಿನಲ್ಲಿಯೂ ಬಿರುಸಿನ ಸಂಘಟನೆ ಮುಂದುವರೆದಿದೆ. ಸಂಘಟನೆಯಿಂದ ಬಲಯುತವಾಗಿ ಎಂಬ ನಾರಾಯಣ ಗುರುಗಳ ತತ್ವದಂತೆ ಕುಶಾಲನಗರದಲ್ಲಿ ಸಮುದಾಯ ಬಾಂಧವರು ಒಗ್ಗೂಡಿ ವಿಜೃಂಭಣೆಯಿಂದ ಪ್ರತಿ ವರ್ಷ ಕಾರ್ಯಕ್ರಮ ಏರ್ಪಡಿಸುತ್ತಿರುವ ಕಾರ್ಯವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಎಸ್.ಸುಧೀರ್ ಮಾತನಾಡಿ, ಕಾರ್ಯಕ್ರಮದ ವಿವರ ನೀಡಿದರು.
ಈ ಸಂದರ್ಭ ಸಮಾಜದ ಗೌರವಾಧ್ಯಕ್ಷ ಬಿ.ಟಿ.ರಮೇಶ್, ಸಲಹೆಗಾರರಾದ ಚಂದ್ರಶೇಖರ್ ಬೆಣಗಾಲ್, ಸತೀಶ್ ಕುಂದರ್, ಉಪಾಧ್ಯಕ್ಷೆ ಕುಸುಮಾವತಿ‌ ಕೆ, ಕಾರ್ಯದರ್ಶಿ ದಿನೇಶ್ ಬಿ.ಟಿ, ಸಹ ಕಾರ್ಯದರ್ಶಿ ಅರುಣ್ ಬಿ.ಡಿ, ಖಜಾಂಚಿ, ಆಶಾ ಬಿ.ಎ ಸೇರಿದಂತೆ ನಿರ್ದೇಶಕರು ಇದ್ದರು.
ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸಮಾಜ ಬಾಂಧವರಿಗೆ ವಿವಿಧ ಆಟೋಟ, ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!