ಕುಶಾಲನಗರ, ನ 14: ಕಾವೇರಿ ನಿಸರ್ಗಧಾಮದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ತೀರಾ ಶಿಥಿಲಾವಸ್ಥೆಯಲ್ಲಿರುವ ಕಾರಣ ಸಂಭವನೀಯ ಅಪಾಯ ತಪ್ಪಿಸುವ ಸಲುವಾಗಿ ಪ್ರವಾಸಿ ತಾಣ ಬಂದ್ ಮಾಡಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ತಿಳಿಸಿದರು.
ಪ್ರವಾಸಿ ತಾಣ ಮುಚ್ಚಿರುವ ಕಾರಣ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ಸ್ಥಳೀಯ ಕೆಲವು ಆರೋಪಿಸಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳಲು ಅವಕಾಶ ಮಾಡಿಕೊಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ತಾಂತ್ರಿಕ ಪರಿಣಿತರ ಸೂಚನೆಯಂತೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಿಸರ್ಗಧಾಮ ಮುಚ್ಚಲಾಗಿದೆ. ಇದು ಜೀವಕ್ಕೆ ಸಂಬಂಧಿಸಿದ ವಿಚಾರವಾದ ಕಾರಣ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಅರಣ್ಯ ಇಲಾಖೆ ಸಿದ್ದವಿಲ್ಲ ಎಂದು ತಿಳಿಸಿದರು.
ಇತರರಂತೆ ಅರಣ್ಯ ಇಲಾಖೆಗೂ ಕೂಡ ಆದಾಯ ಕ್ಷೀಣಿಸಲಿದೆ. ದುರಸ್ಥಿ ಕಾರ್ಯ ಮುಗಿಯಲು ತಿಂಗಳುಗಳ ಕಾಲ ಸಮಯ ಹಿಡಿಯಲಿದೆ. ಈ ನಿಟ್ಟಿನಲ್ಲಿ ಒಳಗೆ ಪ್ರಾಣಿಪಕ್ಷಿಗಳು, ಅರಣ್ಯ ಸಂಪತ್ತನ್ನು ಕಾಪಾಡುವ ಸಂಬಂಧ ಪರ್ಯಾಯ ಮಾರ್ಗ ಸಿದ್ದಪಡಿಸಲಾಗುತ್ತಿದೆ ಹೊರತು ಪ್ರವಾಸಿಗರಿಗೆ ತೆರಳಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ಈಗಿರುವ ಸೇತುವೆ ದುರಸ್ತಿಗೆ 40 ರಿಂದ 50 ಲಕ್ಷ ವೆಚ್ಚವಾಗಲಿದೆ, ಹೊಸ ತೂಗುಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
Back to top button
error: Content is protected !!