ಸಭೆ

ಗುಡ್ಡೆಹೊಸೂರು ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಸಭೆ

ಕುಶಾಲನಗರ, ಸೆ 17: ಗುಡ್ಡೆಹೊಸೂರು ಗ್ರಾಮಪಂಚಾಯತ್ 2024-25ನೇ ಸಾಲಿನ ಮೊದಲ‌ ಹಂತದ ಗ್ರಾಮಸಭೆ ಪಂಚಾಯ್ತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ‌ ಇಲಾಖೆ ವ್ಯಾಪ್ತಿಯ ಯೋಜನೆಗಳು, ಕಾಮಗಾರಿಗಳು, ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಒದಗಿಸಿದರು.
ಚೆಸ್ಕಾಂ ಅಸಮರ್ಪಕ ‌ಕಾರ್ಯವೈಖರಿ, ರಸ್ತೆ ದುರಸ್ಥಿ ಕಾಮಗಾರಿಗಳು, ಹಾರಂಗಿ ಪುನರ್ವಸತಿ ಗ್ರಾಮಗಳಿಗೆ ಅಗತ್ಯ ಅನುದಾನ ಒದಗಿಸಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳುವ ಬಗ್ಗೆ, ಹಕ್ಕುಪತ್ರ ವಿತರಣೆ, ನಿವೇಶನ ಒದಗಿಸುವ ಕುರಿತು ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ನೀರಾವರಿ‌ ನಿಗಮಕ್ಕೆ‌ ಒಳಪಡುವ ಪ್ರದೇಶಗಳಲ್ಲಿ ಜಂಗಲ್ ಕಟ್ಟಿಂಗ್, ಕಾಡಾನೆ ಹಾವಳಿ ವಿಚಾರಗಳ ಬಗ್ಗೆ ಗ್ರಾಮಸ್ಥರು ಹಾಗೂ ಆಯಾ ಇಲಾಖೆ ಅಧಿಕಾರಿಗಳ ನಡುವೆ ಚರ್ಚೆ ನಡೆಯಿತು.
ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ತೋಡಿಕೊಂಡರು.

ಅತ್ತೂರು ಗ್ರಾಮದಲ್ಲಿ ನೀರಾವರಿ ನಿಗಮದಿಂದ ನೀಡಲಾದ 68 ಲಕ್ಷಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಚೆಸ್ಕಾಂ ಕಳೆದ ಮೂರು ನಾಲ್ಕು ವರ್ಷಗಳಿಂದ ಕಾಮಗಾರಿಯ ಮಾಹಿತಿ ನೀಡುತ್ತಿಲ್ಲ, ಗ್ರಾಮ ಪಂಚಾಯಿತಿಗೆ ಪೂರ್ಣಗೊಂಡ ಕಾಮಗಾರಿಯನ್ನು ಹಸ್ತಾಂತರಿಸಿರುವುದಿಲ್ಲ ಎಂದು ಗ್ರಾಮಸ್ಥರಾದ ರವಿ ಅವರು ಆರೋಪಿಸಿದರು. ಈ ಬಗ್ಗೆ ಚೆಸ್ಕಾ ಅಧಿಕಾರಿ ಮಾತನಾಡಿ, ಮೂರು ದಿನಗಳಲ್ಲಿ ಸದರಿ ಕಾಮಗಾರಿಯನ್ನು ಹಸ್ತಾಂತರಿಸುವುದಾಗಿ ಮಾಹಿತಿ ನೀಡಿದರು.

ರಸಲ್ ಪುರ ಸರ್ವೆ ನಂಬರ್ 49/1 ರ 11 ಹೆಕ್ಟರ್ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಮೀಸಲು ಅರಣ್ಯ ಎಂದು ಘೋಷಿಸುವ ಕುರಿತು ಪ್ರಕಟಣೆ ಹೊರಡಿಸಿದ್ದು ಈ ಬಗೆ ಗ್ರಾಮ ಸಭೆಯು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸುವಂತೆ ತೀರ್ಮಾನಿಸಿತು.

ಬಸವನಹಳ್ಳಿ ಗ್ರಾಮದ ಮಹೇಶ್ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಆಸ್ತಿಯಲ್ಲಿ ಅನಧಿಕೃತವಾಗಿ ಕಟ್ಟಡಗಳ ನಿರ್ಮಿಸುತ್ತಿದ್ದು ಸದರಿ ಕಟ್ಟಡಗಳನ್ನು ಯಾಕೆ ತೆರವುಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು, ಈ ಬಗ್ಗೆ ಗ್ರಾಮ ಪಂಚಾಯತ್ ವತಿಯಿಂದ ಸದರಿ ಕಟ್ಟಡಗಳನ್ನು ತೆರವುಗೊಳಿಸಲು ಕೂಡಲೇ ಕ್ರಮ ವಹಿಸಲಾಗುವುದು ಎಂದು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸುಮೇಶ್ ಮಾಹಿತಿ ನೀಡಿದರು.

ಅತ್ತೂರು ಗ್ರಾಮವನ್ನು ಗ್ರಾಮ ಠಾಣಾ ಎಂದು ಘೋಷಣೆ ಮಾಡಿದ್ದು ಇದುವರೆಗೂ ಸಹ ಗ್ರಾಮ ಪಂಚಾಯಿತಿಗೆ ಗ್ರಾಮ ಠಾಣೆಯನ್ನು ಹಸ್ತಾಂತರಿಸಿಲ್ಲ ಎಂದು ಅತ್ತೂರು ಗ್ರಾಮದ ರವಿ ಮತ್ತು ಜಗ್ಗ ಅವರು ಪ್ರಸ್ತಾಪಿಸಿದರು. ಈ ಬಗ್ಗೆ ಕ್ರಮ ವಹಿಸಿ ಸರ್ವೇ ಮಾಡಿ ಹಸ್ತಾಂತರಿಸಲು ಕ್ರಮವಹಿಸಲಾಗುವುದೆಂದು ಗ್ರಾಮ ಆಡಳಿತ ಅಧಿಕಾರಿ ಮಾಹಿತಿ ನೀಡಿದರು.

ತೆಪ್ಪದ ಕಂಡಿಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದ್ದು ನಿವಾಸಿಗಳಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸಲು ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದಾಗ, ಸದರಿ ಕುಟುಂಬಗಳಿಗೆ ವಸತಿ ಮತ್ತು ನಿವೇಶನ ಕಲ್ಪಿಸಲು ಈಗಾಗಲೇ ಗುಡ್ಡೆಹೊಸೂರು ಹಾಗೂ ಬೊಳ್ಳೂರು ಗ್ರಾಮದಲ್ಲಿ 2.5 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪಟ್ಟು‌ಮಾದಪ್ಪ, ಪಿಡಿಒ ಸುಮೇಶ್, ಕಾರ್ಯದರ್ಶಿ ಕುಮಾರಸ್ವಾಮಿ ಸೇರಿದಂತೆ ಸದಸ್ಯರುಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!