ರಾಜಕೀಯ

ಕುಶಾಲನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆ, ಕಾಂಗ್ರೆಸ್ ಬೆಂಬಲಿಸಲು ಮುಖಂಡರ ಕರೆ

ಕುಶಾಲನಗರ, ಏ 01: ಕುಶಾಲನಗರ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ ಮತ್ತು ಚುನಾವಣಾ ಪ್ರಚಾರ ಸಭೆ ಕುಶಾಲನಗರದ ಕಾರು ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಮಾತನಾಡಿ, ಚುನಾವಣೆಗೆ ಕಾರ್ಯಕರ್ತರೇ ಬೆನ್ನೆಲುಬು. ಎಲ್ಲೆಡೆ ‌ಮನೆಮನೆಗೆ ಕಾಂಗ್ರೆಸ್ ಸರಕಾರದ ಜನಪರ ಕಾರ್ಯಕ್ರಮಗಳು, ಬಿಜೆಪಿಯ ವೈಫಲ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿಗೆ ಕಾರಣಕರ್ತರಾಗಬೇಕು. ಈ‌ ನಿಟ್ಟಿನಲ್ಲಿ ಇಂತಹ ಸಮಾವೇಶಗಳ ಮೂಲಕ ಕಾರ್ಯಕರ್ತರಿಗೆ ಹುರುಪು ತುಂಬಲಾಗುತ್ತಿದೆ. ಕೇಂದ್ರದ ಬಿಜೆಪಿ ಸರಕಾರದಿಂದ ಪ್ರಜಾ ಪ್ರಭುತ್ವ ವ್ಯವಸ್ಥೆ ಹದಗೆಟ್ಟಿದೆ. ಪ್ರಶ್ನಿಸುವವರ ದನಿ‌ ಅಡಗಿಸುವ ಕೆಲಸ‌ ಮಾಡಲಾಗುತ್ತಿದೆ. ರೈತ ವಿರೋಧಿ, ವಿವಿಧ ಸುಳ್ಳು ಭರವಸೆಗಳ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದರು. ಮೋದಿ ಸರಕಾರದಲ್ಲಿ ಜನಸಾಮಾನ್ಯರ ಬದುಕು ದುಸ್ಥರವಾಗಿದೆ. ಶ್ರೀಮಂತರು, ಬಂಡವಾಳಶಾಹಿ ಪರವಾದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ, ಬ್ರಿಟೀಷರಿಗಿಂತ ಕೆಟ್ಟ ಆಳ್ವಿಕೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಈ‌ ಚುನಾವಣೆ ಭಾರತದ ಅಸ್ತಿತ್ವ ಪ್ರಶ್ನಿಸುವ ಚುನಾವಣೆಯಾಗಿದೆ. ಸಂವಿಧಾನದ ಅಳಿವು ಉಳಿವಿನ ಚುನಾವಣೆಯಾಗಿದೆ. ಮೋದಿ ಎಂಬ ವ್ಯಕ್ತಿ ಪೂಜೆ ಸಲ್ಲದು. ವ್ಯಕ್ತಿ ಪೂಜೆ‌ ಮಾಡಿದರೆ ಆತ ಸರ್ವಾಧಿಕಾರಿಯಾಗುತ್ತಾನೆ. ಸಂವಿಧಾನ ಬುಡಮೇಲು‌ ಮಾಡುವ ಬಿಜೆಪಿಗರ ಯೋಜನೆಗೆ ಅವಕಾಶ ನೀಡಬಾರದು ಎಂದರು.

ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕೊಡಗಿನಲ್ಲಿ ಇಬ್ಬರು ಉತ್ತಮ ಶಾಸಕರನ್ನು ಮತದಾರರು ಆಯ್ಕೆ‌ಮಾಡಿದ್ದಾರೆ. ಇಬ್ಬರೂ‌ ಕೂಡ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಅತಿ ದೊಡ್ಡ ಪಕ್ಷ ಬಿಜೆಪಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ರಾಜ್ಯದಲ್ಲಿ ಬಿಜೆಪಿಯ ದುರ್ಬಲತೆಗೆ ಸಾಕ್ಷಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಆಶೀರ್ವಾದಂತೆ ಲೋಕಸಭಾ ಚುನಾವಣೆಯಲ್ಲಿ ಕೂಡ‌ ನಮ್ಮ ಬೆಂಬಲಿಸಬೇಕಿದೆ ಎಂದರು.

ಮುಖ್ಯಮಂತ್ರಿಗಳ‌ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳ ಬಗ್ಗೆ ವಿವರಿಸಿದರು. ಕಾಂಗ್ರೆಸ್ ಕೈ ಬಲಪಡಿಸುವ ಕೆಲಸ ಮತದಾರ ಫಲಾನುಭವಿಗಳಿಂದ ಆಗಬೇಕಿದೆ ಎಂದರು.

ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ‌ ಮಾತನಾಡಿ, ಲಕ್ಷ್ಮಣ್ ಅವರ ಗೆಲುವಿಗೆ ಕಾರ್ಯಕರ್ತರು ಈಗಾಗಲೆ‌ ಸಜ್ಜಾಗಿದ್ದು, ಕಾಂಗ್ರೆಸ್ ಈ‌ ಬಾರಿ ಜಯಭೇರಿ ಬಾರಿಸಲಿದೆ ಎಂದರು.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಮಾತನಾಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಎಂ ಎಲ್ ಸಿ ಗಳಾದ ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಮಂಜುನಾಥ್ ಗುಂಡುರಾವ್, ನಟೇಶ್ ಗೌಡ, ಶ್ಯಾಂ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ವಿವಿಧ ಘಟಕಗಳ ಪ್ರಮುಖರಾದ ಶಿವಶಂಕರ್, ಕಿರಣ್ ಕುಮಾರ್, ನವೀನ್ ಗೌಡ, ಟಿ.ಪಿ.ಹಮೀದ್, ಬಿ.ಡಿ.ಅಣ್ಣಯ್ಯ, ಜೋಸೆಫ್ ವಿಕ್ಟರ್ ಸೋನ್ಸ್, ಎಂ.ಕೆ.ದಿನೇಶ್, ಫಿಲೋಮಿನಾ, ಸುನಿತಾ, ಜಯಲಕ್ಷ್ಮಿ ನಂಜುಂಡಸ್ವಾಮಿ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!