ಟ್ರೆಂಡಿಂಗ್
ಹಂದಿ ಮಾಂಸ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ
ವರದಿ: ಸತೀಶ್ ನಾರಾಯಣ್ ಸಿದ್ದಾಪುರ
ಕೊಡಗು ಜಿಲ್ಲೆಯ ಖಾದ್ಯಗಳಲ್ಲಿ ಹಂದಿ ಮಾಂಸ ಪ್ರಮುಖವಾಗಿದೆ. ಇಲ್ಲಿನ ಬಹುತೇಕ ಕಾರ್ಯಕ್ರಮಗಳಲ್ಲಿ ಹಂದಿಮಾಂಸ ಎಲ್ಲರ ಫೇವರೆಟ್. ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಆಚರಣೆಗಳಾದ ಕೈಲ್ ಪೊಳ್ದ್ ಹಬ್ಬದಲ್ಲಿ ಹಂದಿ ಮಾಂಸ ಇಲ್ಲದೆ ಆಚರಣೆಯೇ ಇಲ್ಲ ಎಂಬಂತಿದೆ.ಹಂದಿ ಮಾಂಸಕ್ಕೂ ಕೊಡಗಿಗೂ ಎಲ್ಲಿಲ್ಲದ ನಂಟು. ಕೊಡಗಿಗೆ ಆಗಮಿಸುವ ಪ್ರವಾಸಿಗರಲ್ಲಿ ಹಲವರು ಹೊಟೇಲ್ ಅಥವಾ ಹೋಂ ಸ್ಟೇಗಳಲ್ಲಿ ಕೊಡಗಿನ ಸಾಂಪ್ರದಾಯಿಕ ಖಾದ್ಯ ಕಡುಬಿಟ್ಟು ಹಾಗೂ ಹಂದಿ ಮಾಂಸ(ಕಡುಂಬಿಟ್ ಪಂದಿಕರಿ ಕೊಡವ ಭಾಷೆಯಲ್ಲಿ)ಕ್ಕಾಗಿ ಬೇಡಿಕೆ ಇಡುವುದು ಸಾಮಾನ್ಯವಾಗಿದೆ.
ಕೊಡಗು ಜಿಲ್ಲೆಯಲ್ಲಿ ಹಂದಿ ಮಾಂಸ ಫೇವರೆಟ್ ಏಕೆ ?
ಕೊಡಗು ಜಿಲ್ಲೆಯು ಕೃಷಿ ಆಧಾರಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ,ಕೃಷಿ ಬೆಳೆಗಳನ್ನು ನಾಶಪಡಿಸಲು ಕಾಡು ಹಂದಿಗಳು ಲಗ್ಗೆ ಇಡುತ್ತಿದ್ದವು.ಪ್ರಾಚೀನ ಕಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಭೇಟೆಗಾರಿಕೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಬೆಳೆ ನಾಶಪಡಿಸುವ ಹಂದಿಗಳ ಬೇಟೆ ನಡೆಯುತ್ತಿತ್ತು. ಹಂದಿ ಮಾಂಸದ ಸಾರು ಎಲ್ಲ ಮಾದರಿಯ ತಿನಿಸುಗಳೊಂದಿಗೆ ಸೇವಿಸಬಹುದಾಗಿರುವುದರಿಂದ ಹಂದಿ ಮಾಂಸ ಇಲ್ಲಿನ ಸಾಂಪ್ರದಾಯಿಕ ಆಹಾತವಾಗಿದೆ.ಇಲ್ಲಿನ ಪ್ರತಿಯೊಂದು ಶುಭ ಸಮಾರಂಭಗಳಿಗೆ ಹಂದಿ ಮಾಂಸ ಬೇಕೆ ಬೇಕು. ಮದ್ಯ ಪ್ರಿಯರಿಗಂತೂ ಪ್ರಿಯವಾದ ಆಹಾರವಾಗಿದೆ.ಹಂದಿಯನ್ನು ಮಾಂಸಕ್ಕಾಗಿ ಸಾಕುವ ಪ್ರಾಣಿಯಾಗಿದೆ. ಅಲ್ಲದೆ ಹಂದಿಗಳು ಒಂದು ಬಾರಿಗೆ 10-12 ಮರಿಗಳನ್ನು ಹಾಕುತ್ತವೆ. ಈ ಹಿನ್ನೆಲೆಯಲ್ಲಿ ಹಂದಿ ಸಾಕಾಣಿಕೆ ಲಾಭದಾಯಕ ವಾಗಿರುವುದು ಕೂಡ ಒಂದು ಕಾರಣ.
ಟನ್ ಲೆಕ್ಕದಲ್ಲಿ ಮಾಂಸ ಮಾರಾಟ :- ಕೊಡಗು ಜಿಲ್ಲೆಯಲ್ಲಿ ಪ್ರತಿದಿನ ಅಂದಾಜು 5 ಸಾವಿರಕ್ಕೂ ಅಧಿಕ ಹಂದಿ ಮಾಂಸ ಮಾರಾಟವಾಗುತ್ತಿದೆ. ಮದುವೆ ಸಮಾರಂಭಗಳು, ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೂ ಹಂದಿ ಮಾಂಸವನ್ನು ಗ್ರಾಹಕರು ಖರೀದಿಸುತ್ತಾರೆ. ಉಳಿದಂತೆ ಬಾರ್, ಹೊಟೇಲ್, ರೆಸಾರ್ಟ್, ಹೋಂ ಸ್ಟೇಗಳಿಗೂ ಹಂದಿ ಮಾಂಸ ಮುಖ್ಯವಾಗಿ ಬೇಕಾಗಿದೆ.
ಗರಿಷ್ಠ ಬೆಲೆ ತಲುಪಿದ ಹಂದಿ ಮಾಂಸ :- ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಒಂದು ಕೆ ಜಿ ಮಾಂಸಕ್ಕೆ 220-240 ಬೆಲೆ ನಿಗದಿಪಡಿಸಲಾಗಿತ್ತು.ಸಾಮಾನ್ಯವಾಗಿ ಕೈಲ್ ಪೊಳ್ದ್ ಹಬ್ಬದ ಸಂಧರ್ಭದಲ್ಲಿ ಮಾತ್ರ ವರ್ಷಕ್ಕೆ ಹತ್ತು ರೂ ಏರಿಕೆಯಾಗುತ್ತಿತ್ತು.ಆದರೆ ಈ ವರ್ಷ ಒಂದೇ ಬಾರಿಗೆ 40 ರೂ ಏರಿಕೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 280 -300 ರೂ ಬೆಲೆಗೆ ಮಾಂಸ ಮಾರಾಟವಾಗುತ್ತಿದೆ. ಕೋಳಿ ಮಾಂಸಕ್ಕೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ದೊರಕುತ್ತಿದ್ದ ಹಂದಿ ಮಾಂಸ ಇದೀಗ ದುಬಾರಿ ಬೆಲೆ ನೀಡಿ ಖರೀದಿಸಬೇಕಾದ ಅನಿವಾರ್ಯ ಗ್ರಾಹಕರದ್ದಾಗಿದೆ.
ಹಂದಿ ಜ್ವರಕ್ಕೂ ಮಾಂಸ ನಿಷೇಧಿಸದ ಗ್ರಾಹಕರು :- ಕಳೆದ ವರ್ಷ ಹಂದಿ ಜ್ವರಕ್ಕೆ ಜಿಲ್ಲೆಯ ಸಾವಿರಾರು ಹಂದಿಗಳು ಬಲಿಯಾಗಿತ್ತು. ಈ ಸಂಧರ್ಭದಲ್ಲಿ ಸಾಮಾಜಿಕ ಮಾಂಸಮಾರಾಟ ಸ್ಥಗಿತಗೊಳ್ಳಬೇಕಿತ್ತು. ಆದರೆ ಮಾಂಸ ಪ್ರಿಯರು ಹಂದಿ ಜ್ವರಕ್ಕೆ ಖ್ಯಾರೆ ಮಾಡದಿರುವುದು ಮಾರಟಾಗಾರರ ಹಾಗೂ ಹಂದಿ ಸಾಕಾಣಿಕೆಗಾರರಿಗೆ ನೆಮ್ಮದಿ ತರಿಸಿದೆ.ಜ್ವರ ಇರುವ ಸಂಧರ್ಭದಲ್ಲಿ ಹಂದಿ ಮಾಂಸ ಕೆ ಜಿ ಗೆ ರೂ 230-240 ಮಾರಾಟ ಮಾಡಿರುವುದು ವಿಶೇಷ.
ಹಂದಿ ಮಾಂಸ ಬೆಲೆ ಏರಿಕೆಗೆ ಕಾರಣಗಳು.
ಹಂದಿಗಳಲ್ಲಿ ಕಾಣಿಸಿದ ಆಪ್ರಕನ್ ಸಾವಿನ್ ಫೀವರ್ ರೋಗದಿಂದಾಗಿ ಹಂದಿಗಳು ಸಾವನಪ್ಪುತ್ತಿದೆ. ಒಂದು ಹಂದಿಗೆ ಜ್ವರ ಕಾಣಿಸಿಕೊಂಡಲ್ಲಿ ಜೊತೆಯಲ್ಲಿರುವ ಹಂದಿಗಳಿಗೂ ರೋಗ ಬೇಗ ಹರಡುತ್ತದೆ. ಈ ಜ್ವರ ಬಾದಿಸಿದ ಹಂದಿಗೂಡಿನ ಸುತ್ತ ಸುಮಾರು ಎರಡು ಕಿ ಮೀ ದೂರದಲ್ಲಿನ ಹಂದಿಗಳಿಗೂ ರೋಗ ಹರಡಿ ಸಾವನಪ್ಪುತ್ತದೆ.ಭಾರತದಲ್ಲಿ ಮೊದಲು ಅಸ್ಸಾಂ ರಾಜ್ಯದಲ್ಲಿ ಈ ರೋಗ ಕಾಣಿಸಿಕೊಂಡಿದ್ದು ತದ ನಂತರ ಎಲ್ಲೆಡೆ ಹರಡಿದೆ. ಈ ರೋಗದಿಂದಾಗಿ ಕೊಡಗು ಜಿಲ್ಲೆಯ ಬಹುತೇಕ ಹಂದಿ ಸಾಕಾಣಿಕೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಅಲ್ಲದೆ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕೇವಲ 20% ಹಂದಿಗಳು ಉಳಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.ಹಂದಿ ಕನಿಷ್ಟ ತೂಕ ಹೊಂದಲು 8-11 ತಿಂಗಳು ಬೇಕಾಗಿರುವುದರಿಂದ ಇನ್ನೂ ಒಂದು ವರ್ಷಕ್ಕೆ ಹಂದಿ ಮಾಂಸದ ಬೆಲೆ ಏರಿಕೆ ಕಂಡುಬರಲಿದೆ.