ಕುಶಾಲನಗರ, ಜು. 21: ಪೋಷಕರು ಶಿಕ್ಷಕರು ನೀಡುವ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಮಕ್ಕಳು ಸಾಮಾಜಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಸಾದ್ ಕೆ ಬಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರ ಸಮೀಪದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ನಡೆದ ವನಮಹೋತ್ಸವ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನೆ ಶಾಲೆ ಮತ್ತಿತರ ಕಡೆಗಳಲ್ಲಿ ಮಕ್ಕಳ ಮೇಲೆ ಉಂಟಾಗುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಮತ್ತು ಮಕ್ಕಳ ಸಂರಕ್ಷಣೆ ಬಗ್ಗೆ ಕಠಿಣ ಕಾನೂನುಗಳು ಇವೆ. ಮಕ್ಕಳು ಲೈಂಗಿಕವಾಗಿ ದೌರ್ಜನ್ಯಕ್ಕೆ ರಕ್ಷಿಸುವ ನಿಟ್ಟಿನಲ್ಲಿ ಮಕ್ಕಳ ವಿಶೇಷ ರಕ್ಷಣಾ ಘಟಕ ಎಲ್ಲೆಡೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅವರು ಮಾಹಿತಿ ಒದಗಿಸಿದರು. ಈ ಸಂಬಂಧ ಕಾನೂನು ಪ್ರಾಧಿಕಾರದ ವತಿಯಿಂದ ಶಾಲೆಗಳಲ್ಲಿ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ ಎಂದರು.
ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ದೂರು ಮೇರೆಗೆ ತನಿಖೆ ಕೈಗೊಂಡು ಕಾನೂನು ಕ್ರಮಗಳನ್ನು ಜರಗಿಸಲಾಗುತ್ತಿದೆ ಎಂದರು. ಇದೇ ಸಂದರ್ಭ ಮಾತನಾಡಿದ ನ್ಯಾಯಾಧೀಶರು ಪರಿಸರವನ್ನು ರಕ್ಷಿಸಿದಲ್ಲಿ ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಮಕ್ಕಳ ವಿಶೇಷ ಪೊಲೀಸ್ ರಕ್ಷಣಾ ಘಟಕದ ಪ್ರಮುಖರಾದ ಸುಮತಿ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಕ್ಕಳಿಗೆ ಸುರಕ್ಷಿತ ವಾತಾವರಣದ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಶೋಷಣೆ ಹಲ್ಲೆ ಪ್ರಕರಣಗಳು ಕಂಡುಬರುತ್ತಿದ್ದು ಹೆಣ್ಣು ಮಕ್ಕಳಿಗಿಂತ ಅಧಿಕವಾಗಿ ಗಂಡು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಅಂಕಿ ಅಂಶಗಳು ಕಂಡು ಬರುತ್ತಿವೆ ಎಂದರು.
ದೌರ್ಜನ್ಯಗಳು ಶೋಷಣೆಗಳು ನಡೆದ ಸಂದರ್ಭ ಮಕ್ಕಳು ಯಾವುದೇ ರೀತಿಯ ಮುಜುಗರಕ್ಕೆ ಒಳಗಾಗದೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಾಗಿದೆ ಎಂದು ಅವರು ಹೇಳಿದರು.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಕಾನೂನು ಸೇವಾ ಘಟಕದ ಉಪ ಪ್ರಧಾನ ಅಧೀಕ್ಷಕಿ ಮೈಮುನ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಭಾರತಿ, ಕಾವೇರಿ ನದಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಎಂ ಎನ್ ಚಂದ್ರಮೋಹನ್ ಅವರುಗಳು ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ ಎಸ್ ಜೋಯಪ್ಪ ಇದ್ದರು.
ಪ್ರಾಂಶುಪಾಲರಾದ ಪ್ರಕಾಶ್ ಅವರು ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಣೆ ಮತ್ತು ಶಿಕ್ಷಕರಾದ ಮಂಜುನಾಥ್ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಶಾಲೆಯ ಆವರಣದಲ್ಲಿ ತೆಂಗಿನ ಗಿಡ ಮತ್ತು ಸಸಿಗಳನ್ನು ನೆಡಲಾಯಿತು.
Back to top button
error: Content is protected !!