ಕಾರ್ಯಕ್ರಮ
ಕೊಡಗು ಜಿಲ್ಲಾ ಪದವಿ ಪೂ ಕಾಲೇಜು ಉಪನ್ಯಾಸಕರ ಸಂಘದಿಂದ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ
ಕುಶಾಲನಗರ, ಜೂ 29:
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದಲ್ಲಿ ಮಾತ್ರ ನಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯುತ್ತದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಸಂಘ ಕೊಡಗು ಶಾಖೆ ವತಿಯಿಂದ ಕುಶಾಲನಗರದ ಸರ್ಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಾಗೂ ಶೇ.ನೂರು ಫಲಿತಾಂಶ ಪಡೆದ ಕಾಲೇಜುಗಳ ಪ್ರಾಂಶುಪಾಲರಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು. ಕಾಲೇಜಿನ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ ಅವರು ಶುಭ ಹಾರೈಸಿದರು.
ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಸಂಘದ ಅಧ್ಯಕ್ಷ ಫಿಲಿಪ್ ವಾಸ್ ಮಾತನಾಡಿ, ರಾಜ್ಯದಲ್ಲಿ ಪಿಯುಸಿ ಫಲಿತಾಂಶದಲ್ಲಿ ಕೊಡಗು ಜಿಲ್ಲೆ ಮೂರನೇ ಸ್ಥಾನ ಪಡೆದುಕೊಂಡಿದೆ.ಉಪನ್ಯಾಸಕರ ಕೊರತೆಯ ನಡುವೆಯೂ ಉತ್ತಮ ಫಲಿತಾಂಶ ತರುವಲ್ಲಿ ಶ್ರಮಿಸುತ್ತಿದ್ದೇವೆ ಎಂದರು.
ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿ ಜೀವನವು ಅಮೂಲ್ಯವಾಗಿದ್ದು, ನಿತ್ಯ ಪರಿಶ್ರಮ, ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿದಾಗ ವಿಶಿಷ್ಟ ಸಾಧನೆ ಮಾಡಲು ಸಾಧ್ಯ. ಹೆತ್ತವರು ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಕೆ.ಜಿ.ಅಶ್ವಿನಿಕುಮಾರ್,ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜು,ಖಜಾಂಜಿ ಉಮೇಶ್ ಕುಮಾರ್ ,ಸಹ ಕಾರ್ಯದರ್ಶಿ ತಿಲೋತ್ತಮೆ,ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಸರ್ವೋತ್ತಮ,ಸಂಘದ ಮುಖಂಡ ನಾಗಪ್ಪ ಯಾಲಕ್ಕಿಕಟ್ಟೆ,ವಿವಿಧ ಕಾಲೇಜುಗಳ ಉಪನ್ಯಾಸಕರು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಶೇ.ನೂರು ಫಲಿತಾಂಶ ಪಡೆದ ಕಾಲೇಜಿಗಳ ಪ್ರಾಂಶುಪಾಲರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಜೀಕನ್ನಡ ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್ ಅವರಿಗೆ ಸನ್ಮಾನಿಸಲಾಯಿತು.