ಪ್ರಕಟಣೆ

ರಾಜಕಾರಣಿ ಎಸ್.ಎನ್.ರಾಜಾರಾವ್ ನಿಧನ: ವಿವಿಧ ಮುಖಂಡರಿಂದ ಅಂತಿಮ‌ ದರ್ಶನ

 ಕುಶಾಲನಗರ, ಏ 18: ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೂಡಿಗೆ ಗ್ರಾಪಂ ವ್ಯಾಪ್ತಿಯ ಹೆಗ್ಗಡಹಳ್ಳಿ ನಿವಾಸಿ ಎಸ್.ಎನ್.ರಾಜಾರಾವ್ (68) ನಿಧನರಾದರು.
ಅನಾರೋಗ್ಯದಿಂದಾಗಿ ಮೈಸೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜಾರಾವ್ ಸೋಮವಾರ ರಾತ್ರಿ‌ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಸೀಗೆಹೊಸೂರಿನ ಅವರ ತೋಟದಲ್ಲಿ ನೆರವೇರಿತು.
ಮೃತರು ಪತ್ನಿ ಸೇರಿದಂತೆ ಮೂವರು ಗಂಡು ಮಕ್ಕಳು ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೂಡಿಗೆ ಮಂಡಲ ಪ್ರಧಾನರಾಗಿ ರಾಜಕಾರಣ ಆರಂಭಿಸಿದ ರಾಜಾರಾವ್ ಕ್ರಮೇಣ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯರು, ಸಾಮಾಜಿಕ ಸ್ಥಾಯಿ ಸಮಿತಿ‌ ಅಧ್ಯಕ್ಷರೂ ಹಾಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಅಧಿಕಾರ ನಡೆಸಿದ್ದರು. ಸಾಮಾಜಿಕ ಹಾಗು ರಾಜಕೀಯ ರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತಾವು ತೊಡಗಿಸಿಕೊಂಡಿದ್ದರು.
ಅಲ್ಲದೇ ಬಸವನಹಳ್ಳಿಯ ವಿವಿಧೋದ್ದೇಶ ಗಿರಿಜನ ಸಹಕಾರ ಸಂಘ ಸೇರಿದಂತೆ ಕೂಡಿಗೆಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗು ವಿರಾಜಪೇಟೆ ತಾಲ್ಲೂಕಿನ ಅಕ್ರಮ ಸಕ್ರಮ ಸಮಿತಿ‌ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸದಾ ಕಾಲ ಶ್ವೇತ ವಸ್ತ್ರ ಧಾರಿಯಾಗಿಯೇ ರಾಜಕಾರಣದಲ್ಲಿ ದಿನಗಳೆದ ರಾಜಾರಾವ್ ಅವರು ಇತ್ತೀಚೆಗೆ ಸಕ್ಕರೆ ಖಾಯಿಲೆಗೆ ಒಳಗಾಗಿ ತಮ್ಮ ಬಲಗಾಲಿನ ಹೆಬ್ಬೆರಳನ್ನು ಕಳೆದುಕೊಂಡಿದ್ದರು. ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಾಜಾರಾವ್ ಕ್ರಮೇಣ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.
ಬಸವನಹಳ್ಳಿ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರ ಪ್ರಕರಣದಲ್ಲಿ ತಪ್ಪೊಪ್ಪಿಗೆಯೊಂದಿಗೆ ಹಣವನ್ನು ಮರಳಿಸಿ ಅವ್ಯವಹಾರದ ಆರೋಪದಿಂದ ಹೊರಬಂದಿದ್ದ ರಾಜಾರಾವ್ ಅವರು ಈ ಘಟನೆಯಿಂದಾಗಿ ಮಾನಸಿಕವಾಗಿ ಸಾಕಷ್ಟು ಜರ್ಜರಿತರಾಗಿದ್ದರು.
ಮೃತರ ಅಂತ್ಯಕ್ರಿಯೆಯಲ್ಲಿ ಶಾಸಕ ಅಪ್ಪಚ್ಚು ರಂಜನ್, ಕಾಂಗ್ರೆಸ್ ಅಭ್ಯರ್ಥಿ‌ ಡಾ.ಮಂಥರಗೌಡ, ಜೆಡಿಎಸ್ ಅಭ್ಯರ್ಥಿ‌ ನಾಪಂಡ ಮುತ್ತಪ್ಪ, ವಕೀಲ‌ ಹೆಚ್.ಎಸ್. ಚಂದ್ರಮೌಳಿ , ವಿರಾಜ ಪೇಟೆ ತಾಲ್ಲೂಕಿನ ಎ.ಎಸ್.ಪೊನ್ನಣ್ಣ, ಕೆ.ಪಿ.ಚಂದ್ರಕಲಾ, ಧರ್ಮಜ ಉತ್ತಪ್ಪ, ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್.ಅನಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ .ಪಿ.ಶಶಿಧರ್, ಕೂಡಿಗೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತಕುಮಾರ್, ಉಪಾಧ್ಯಕ್ಷ ಟಿ.ಪಿ.ಹಮೀದ್ ಸೇರಿದಂತೆ ಅಪಾರ ಮಂದಿ ಆಗಮಿಸಿ ಅಂತಿಮ‌ ದರ್ಶನ ಪಡೆದರು. ಮೃತರನ್ನು ತೆರೆದ ವಾಹನದಲ್ಲಿ‌ ಮೆರವಣಿಗೆಯಲ್ಲಿ ಕೊಂಡೊಯ್ದು ಕೂಡಿಗೆ ವೃತ್ತದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಶ್ರದ್ದಾಂಜಲಿ‌ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!