ಕಾರ್ಯಕ್ರಮ

ಕೊಡಗು ವಿವಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಕುಶಾಲನಗರ, ಮಾ 28:
ಕೊಡಗು ಜಿಲ್ಲೆಯ ಬಹುಕಾಲದ ಕನಸಾದ ಕೊಡಗು ವಿಶ್ವವಿದ್ಯಾಲವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಂಗಳೂರಿನ ಜ್ಞಾನಜ್ಯೋತಿ ವಿಶ್ವವಿದ್ಯಾನಿಲಯದ ಸಭಾಂಗಣದಿಂದ ವರ್ಚುವಲ್ ಮೂಲಕ ಉದ್ಘಾಟನೆ
ನೆರವೇರಿಸಿದರು.
ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಶುಭ ಹರಸಿದರು. ಉನ್ನತ ಗುಣಮಟ್ಟದ ಶಿಕ್ಷಣವನ್ನು ರಾಜ್ಯಾದ್ಯಂತ ಪ್ರತಿಯೊಬ್ಬರಿಗೂ ನೀಡುವ ಉದ್ದೇಶದೊಂದಿಗೆ ಇಂದು ೦೯ ಹೊಸ ವಿಶ್ವವಿದ್ಯಾಲಯಗಳನ್ನು ಲೋಕಾರ್ಪಣೆಗೊಳಿಸಿದ್ದೇವೆಂದು ತಿಳಿಸಿದರು. ಅಭಿವೃದ್ಧಿ ಮತ್ತು ಕೌಶಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ್ ಮಾತನಾಡಿ, ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಇರಬೇಕು, ಆ ಮೂಲಕ ಶೈಕ್ಷಣಿಕ ಅಸಮತೋಲನ ನಿರ್ಮೂಲನೆ ಆಗಬೇಕು, ಜೊತೆಗೆ ಯುವಜನರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದಾಶಯದೊಂದಿಗೆ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಮಾತನಾಡಿ, ಈ ನಾಡಿನ ಆಶೋತ್ತರಗಳಿಗೆ ಅನುಗುಣವಾಗಿ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಹಾಗೂ ಎಲ್ಲರ ಸಲಹೆ ಮತ್ತು ಸಹಕಾರದೊಂದಿಗೆ ಈ ವಿಶ್ವವಿದ್ಯಾನಿಲಯದ ಸರ್ವತೋಮುಖ ಶ್ರೇಯೋಭಿವೃದ್ಧಿಗಾಗಿ ನನ್ನ ನಾಲ್ಕು ವರ್ಷದ ಅವಧಿಯಲ್ಲಿ ಶ್ರಮಿಸಲಾಗುವುದು ಎಂದರು. ಸಂಶೋಧನಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ವಿವಿಧ ಧನ ಸಹಾಯ ಸಂಸ್ಥೆಗಳಿಂದ ಯೋಜನೆಗಳನ್ನು ಪಡೆಯಲು ಕ್ರಮವಹಿಸಲಾಗುವುದೆಂದರು. ಸರ್ಕಾರದ ಜನಪ್ರತಿನಿಧಿಗಳು ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಾಗೂ ಸಹಕಾರದೊಂದಿಗೆ ನೂತನ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದರು. ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು, ಎಂಎಲ್ಸಿಗಳು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರು, ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು, ಉನ್ನತ ಶಿಕ್ಷಣ ಇಲಾಖೆ ಉಪಕಾರ್ಯದರ್ಶಿ, ಕೊಡಗು ಜಿಲ್ಲಾ ಜಿಲ್ಲಾಧಿಕಾರಿಗಳು, ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾಪಂಚಾಯತಿ, ಕೊಡಗು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಕಾರ್ಯಕ್ರಮದಲ್ಲಿ ವೈಯಕ್ತಕವಾಗಿ ಹಾಗೂ ವಿದ್ಯುನ್ಮಾನ ವಾಹಿನಿಯ ಮೂಲಕ ಭಾಗವಹಿಸಿದ್ದರು. ತೊರೆನೂರು ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು, ಕೊಡಗು ವಿಶ್ವವಿದ್ಯಾಲಯದ ಸಂಯೋಜಿತ ಮತ್ತು ಘಟಕ ಪದವಿ ಕಾಲೇಜುಗಳ ಪ್ರಾಂಶುಪಾಲರುಗಳು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಆಡಳಿತ ವರ್ಗದವರು ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!