ಕುಶಾಲನಗರ, ಜ 25: ರೂ.2 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಾಲಯ ಜೀರ್ಣೋದ್ಧಾರ ಪ್ರತಿಷ್ಠಾಪನ ಮಹೋತ್ಸವ ಜ.26 ರಿಂದ 29.ರವರೆಗೆ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಾಲಯ ಕಟ್ಟಡದ ಹಣಕಾಸು ಸಮಿತಿ ಪ್ರಮುಖ ಎಸ್.ಎಸ್.ಚಂದ್ರಶೇಖರ್ ತಿಳಿಸಿದರು.
ದೇವಾಲಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಯಾವುದೇ ನೆರವಿಲ್ಲದೆ ಸಂಪೂರ್ಣ ದಾನಿಗಳ ಸಹಕಾರದಿಂದ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ.
ದೇವಾಲಯದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ನೂರು ಅಡಿ ಉದ್ದ ಹಾಗೂ ಐವತ್ತು ಅಡಿ ಅಗಲ ವಿಸ್ತೀರ್ಣದಲ್ಲಿ ದಾನಿಗಳ ಸಹಕಾರದಿಂದ ನೂತನ ದೇವಾಲಯಕ್ಕೆ ರೂ.2 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ ಎಂದರು.ದೇವಾಲಯ ಕಾರ್ಯಕ್ಕೆ ಸಹಕರಿಸಿದ ಸರ್ವರಿಗೂ ಅವರು ಧನ್ಯವಾದ ಸಲ್ಲಿಸಿದರು.
ದೇವಾಲಯ ಜೀರ್ಣೋದ್ಧಾರ ಕಾರ್ಯ ನೇತೃತ್ವ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಪವಿತ್ರ ಧಾರ್ಮಿಕ ಕೇಂದ್ರ ಹಾಗೂ ಪ್ರೇಕ್ಷಣೀಯ ಸ್ಥಳವಾಗಿ ಇದು ರೂಪುಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ನ ದಾಸೋಹ ನಡೆಯಲಿದೆ.ಈ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚುರಂಜನ್, ಜಿಲ್ಲಾಧಿಕಾರಿ ಡಾ.ಸತೀಶ್ ಅವರು ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ದೇವಾಲಯ ನಿರ್ಮಾಣ ಕಾರ್ಯ ನಿರ್ವಹಿಸಿದ ಎಂಜಿನಿಯರ್ ಆರ್.ಆರ್.ಕುಮಾರ್ ಹಕ್ಕೆ ಮತ್ತು ಕಟ್ಟಡ ಸಮಿತಿ ಅಧ್ಯಕ್ಷ ಪ್ರಸನ್ನ ಮಾತನಾಡಿದರು.
ಈ ಸಂದರ್ಭ ದೇವಾಲಯ ಸಮಿತಿ ಪ್ರಮುಖರಾದ ರುದ್ರಪ್ಪ, ಮಹೇಶ್, ಬಸವಣ್ಣಯ್ಯ ಮತ್ತಿತರರು ಇದ್ದರು.
Back to top button
error: Content is protected !!