ಕುಶಾಲನಗರ, ಮಾ 17 : ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾ ಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ಸೋಮವಾರ ವೈಭವಯುತವಾಗಿ ನಡೆಯಿತು.
ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿಭಾಗದ ಗ್ರಾಮಗಳ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ತೇರು ಎಳೆದು ಸಂಭ್ರಮಿಸಿದರು.
ಗ್ರಾಮದ ಕಾವೇರಿ ನದಿ ದಂಡೆಯ ಮೇಲೆ ಇರುವ ಶ್ರೀ ಉಮಾಮಹೇಶ್ವರ ದೇವಸ್ಥಾನವನ್ನು 9 ನೇ ಶತಮಾನದಲ್ಲಿ ಚೋಳರ ಒಂದನೇ ರಾಜ ರಾಜ ಜೋಳ ನಿರ್ಮಾಣ ಮಾಡಿದರು. ಪ್ರತಿ ಶಿವರಾತ್ರಿ ಯಂದು ವಿಶೇಷ ಪೂಜಾ ಕಾರ್ಯ ನಡೆಯುವುದರೊಂದಿಗೆ ಆ ದಿನದಂದು ಸೂರ್ಯೋದಯದ ಸೂರ್ಯನ ಕಿರಣಗಳು ನೇರವಾಗಿ ಉಮಾಮಹೇಶ್ವರ ದೇವ ಸ್ಥಾನದ ವಿಗ್ರಹದ ಮೇಲೆ ಬೀಳುತ್ತವೆ. ಇದು ಈ ದೇವಾಲಯದ ವೈಶಿಷ್ಟ್ಯವಾಗಿದೆ.
ಶ್ರೀ ಮಂಟಿಗಮ್ಮ ಹಾಗೂ ಉಮಾ ಮಹೇಶ್ವರ ಗ್ರಾಮ ದೇವಾಲಯ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರ ಸಹಕಾರದೊಂದಿಗೆ ವಾರ್ಷಿಕ ರಥೋತ್ಸವ. ವೈಶಿಷ್ಟ್ಯ ಪೂರ್ಣ ವಾಗಿ ಆಚರಿಸಿ ಸಂಭ್ರಮಿಸಿದರು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅರ್ಚಕ ಗಣೇಶ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ರಥೋತ್ಸವದ ಅಂಗವಾಗಿ ಉಮಾಮಹೇಶ್ವರ ವಿಗ್ರಹಕ್ಕೆ ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮಧ್ಯಾಹ್ನ 12.30 ಗಂಟೆಗೆ ವಿವಿಧ ಪುಷ್ಪಾ ಹಾಗೂ ಭಗವಾಧ್ವಜ ಗಳಿಂದ ಅಲಂಕರಿಸಿದ್ದ ರಥಕ್ಕೆ ಶ್ರೀ ಉಮಾ ಮಹೇಶ್ವರ, ಪಾರ್ವತಿ, ಗಣೇಶ, ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ನಂತರ ಮಹಾ ಮಹಾಮಂಗಳಾರತಿಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ರಥೋತ್ಸವ ಕ್ಕೆ ಚಾಲನೆ ನೀಡಿದರು.
ಭಕ್ತರು ರಥವನ್ನು ದೇವಾಲಯ ಬಳಿಯಿಂದ ಗ್ರಾಮದ ಪ್ರಮುಖ ಬೀದಿ ಮೂಲಕ ಸಂತೆಮಾಳದವರೆಗೂ ಎಳೆದರು. ರಥೋತ್ಸವದ ಮೆರವಣಿಗೆಯಲ್ಲಿ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಈಡುಗಾಯಿ, ಹಣ್ಣು ಜವನ ರಥಕ್ಕೆ ಎಸೆದು ಭಕ್ತಿ ಮೆರೆದರು. ಮೆರವಣಿಗೆ ಸಂದರ್ಭ ಗ್ರಾಮಸ್ಥರು ಮಜ್ಜಿಗೆ,ಪಾನಕ ವಿತರಿಸಿದರು.
ಕಲಾವಿದ ಉದ್ದೂರು ಹೊಸಳ್ಳಿಯ ರವಿ ತಂಡದವರ ವೀರಗಾಸೆ ಕುಣಿತ ಮತ್ತು ನಿಲುವಾಗಿಲು ಮಧು ನೇತೃತ್ವದಲ್ಲಿ ಮಹಿಳೆಯರ ಮಂಗಳವಾದ್ಯ ಗಮನ ಸೆಳೆದವು.
ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಎಸ್.ಜೆ.ಉಮೇಶ್,
ಹಾಗೂ ಕಾರ್ಯದರ್ಶಿ ಎಂ.ಎಸ್. ಗಣೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಈ ಸಂದರ್ಭ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ , ದೇವಾಲಯ ಸಮಿತಿ ಉಪಾಧ್ಯಕ್ಷ ಉಮೇಶ್,ಗೌರವಾಧ್ಯಕ್ಷ ಕಾಳಿಂಗಪ್ಪ,ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಕೆ.ಪ್ರಸನ್ನ , ಕಾರ್ಯದರ್ಶಿ ಬಿ.ಎಸ್.ಬಸವಣ್ಣಯ್ಯ,ಗ್ರಾಮ ಪಂಚಾಯಿತಿ ಅಧ್ಯಕ್ಷ ಲತಾಬಾಯಿ,ಉಪಾಧ್ಯಕ್ಷ ಬಸವರಾಜು,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಮಾಜಿ ದೇವಾಲಯ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮುಖಂಡರಾದ ಎಸ್.ವಿ.ಶಿವಾನಂದ,ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ರವಿ,ಧರಣೇಂದ್ರ ಕುಮಾರ್,ಸಿ.ಎನ್.ಲೋಕೇಶ್, ಎಸ್.ಎ.ಯೋಗೇಶ್,ಸಿ.ಎಲ್.ಲೋಕೇಶ್, ಚೇತನ್ ಮತ್ತಿತರರು ಪಾಲ್ಗೊಂಡಿದ್ದರು.
Back to top button
error: Content is protected !!