ಕುಶಾಲನಗರ, ನ 08: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ನಿವಾಸಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬುವವರಿಗೆ ಸೇರಿದ ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿರುವ ಪ್ರಾಪರ್ಟಿಗೆ ಇಬ್ಬರು ಬಂದು ಇದು ವಕ್ಖ್ ಬೋರ್ಡ್‌ಗೆ ಸೇರಿದ ಆಸ್ತಿ ನೀವು ಈ ಜಾಗವನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ಜಾಗ ಖಾಲಿ ಮಾಡಿಸಲು ಹೊರಗೆ 15 ಜನ ಇದ್ದರೆ ಎಂದು ಬೆದರಿಸಿರುವ ಪ್ರಕರಣ ಸಂಬಂಧ ನಡೆಸಿದ ತನಿಖೆಯಲ್ಲಿ ಸತ್ಯಾಂಶ ಕಂಡುಬಂದಿಲ್ಲ ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ಹೊರಡಿಸಿದೆ.
ಬೆದರಿಕೆ ಒಡ್ಡಿದ್ದಾರೆ ಎಂದು ಕೊಡವ ಸಮಾಜದ ವಿಳಾಸಕ್ಕೆ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದ್ದು, ಈ ಕುರಿತು ಪೊಲೀಸ್ ಅಧೀಕ್ಷಕರ ಕಛೇರಿ ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ಸ್ವೀಕರಿಸಿರುವುದಿಲ್ಲ.
ಸಾಮಾಜಿಕ ಜಾಲಾತಾಣಗಳಲ್ಲಿ ಹರದಾಡುತ್ತಿರುವ ಪೋಸ್ಟ್ ಕುರಿತು ಸ್ವಯಂ ಪೂರ್ವಕವಾಗಿ ದಿನಾಂಕ: 07-11-2024 ರಂದು ಕುಶಾಲನಗರ ಟೌನ್ ಪೊಲೀಸ್ ಠಾಣಾಧಿಕಾರಿ ಹೆಚ್.ಟಿ.ಗೀತಾ ಹಾಗೂ ಸಿಬ್ಬಂದಿಗಳನ್ನು ಬೆಂಗಳೂರಿನಲ್ಲಿರುವ ಪುಚ್ಚಿಮಂಡ ರೇಣುಕಾ ಉತ್ತಪ್ಪ ರವರ ಮನೆಗೆ ಕಳಿಸಿ ಸದರಿ ಘಟನೆ ಕುರಿತು ಮಾಹಿತಿ ಪಡೆದು ವಿಚಾರಣೆಯನ್ನು ನಡೆಸಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿರುತ್ತದೆ.
ಸದರಿ ಘಟನೆಯ ಕುರಿತು ಈವರೆಗಿನ ವಿಚಾರಣೆಯಲ್ಲಿ, ಇದು ಪ್ರೈವೇಟ್ ಪ್ರಾಪರ್ಟಿ ಆಗಿದ್ದು, ವಕ್ ಬೋರ್ಡ್ ಆಸ್ತಿಯಾಗಿರುವುದಿಲ್ಲ. ವಕ್ಸ್ ಬೋರ್ಡ್ ಕಛೇರಿಯಿಂದ ಯಾವುದೇ ವ್ಯಕ್ತಿಗಳು ಬಂದಿರುವುದಿಲ್ಲ ಹಾಗೂ ಜಾಗ ಖಾಲಿ ಮಾಡುವ ಸಂಬಂಧ ವಕ್ ಬೋರ್ಡ್ ನಿಂದ ಯಾವುದೇ ನೋಟೀಸ್ ನೀಡಿರುವುದು ಕಂಡುಬಂದಿರುವುದಿಲ್ಲ, ಈ ಘಟನೆ ಕುರಿತು ಅವರ ಮನೆಯ ಸುತ್ತ-ಮುತ್ತಲಿನ ಜನರಲ್ಲಿ ವಿಚಾರಣೆ ನಡೆಸಿದ್ದು, 15 ಜನರು ಬಂದಿರುವ ಬಗ್ಗೆ ವಿಚಾರಣೆಯಲ್ಲಿ ಕಂಡುಬಂದಿರುವುದಿಲ್ಲ, 29-10-2024 & 30-10-2024 50 ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ತಿಳಿಸಿದ್ದು, ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿದ್ದು, ಆ ದಿನಾಂಕದಂದು ಬೆದರಿಕೆ ಕರೆ ಬಂದಿರುವ ಕುರಿತು ಮಾಹಿತಿ ಇರುವುದಿಲ್ಲ ಹಾಗೂ ಅವರ ಪೋನ್ ಅನ್ನು ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಕರೆ ಸ್ವೀಕರಿಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ, ದೂರುದಾರರ ಹೇಳಿಕೆಯಂತೆ, ಎರಡು ಜನರು ಬಂದಿದ್ದರೆಯೇ ಅಥವಾ ಇಲ್ಲವೇ? ಒಂದು ವೇಳೆ ಬಂದಿದ್ದರೇ ವೈಯಕ್ತಿಕ ವಿಚಾರಕ್ಕಾಗಿ ಅಥವಾ ಬೇರೆ ಯಾವ ಕಾರಣಗಳಿಗಾಗಿ ಬಂದಿರುವ ಕುರಿತು ತನಿಖೆ ನಡೆಸಲಾಗುತ್ತಿದೆ.
ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುವಂತೆ ಪ್ರಕಟಣೆ ಕೋರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದ ಸಮರಸ್ಯವನ್ನು ಕದಡುವ ಪ್ರಯತ್ನ ನಡೆದಲ್ಲಿ ಹಾಗೂ ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಮತ್ತು ಸಮುದಾಯವನ್ನು ಒಡೆದು ಕಾನೂನು & ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸುದ್ದಿಯನ್ನು ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಪರಿಚಿತ ವ್ಯಕ್ತಿಗಳು ಯಾವುದೇ ಸರ್ಕಾರಿ ಇಲಾಖೆ ಅಥವಾ ಸರ್ಕಾರದ ವತಿಯಿಂದ ಬಂದಿರುವುದಾಗಿ ತಿಳಿಸಿ ಬೆದರಿಕೆ ಹಾಕುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿ ಸಹಕರಿಸುವಂತೆ ಪೊಲೀಸ್ ಪ್ರಕಟಣೆ ಸಾರ್ವಜನಿಕರಲ್ಲಿ ಕೋರಿದೆ.
Back to top button
error: Content is protected !!