ಕಾರ್ಯಕ್ರಮ

ಬಸವನಹಳ್ಳಿಯಲ್ಲಿ ” ಶರಣ ಸಂಸ್ಕ್ರತಿ ಪ್ರಸಾರ ” ದತ್ತಿ ಕಾರ್ಯಕ್ರಮ

ಕುಶಾಲನಗರ, ಆ 01 : ಮನುಷ್ಯನ ನೋವು – ನಲಿವು, ದುಃಖ – ದುಮ್ಮಾನಗಳು ಹಾಗೂ ಆತನ ನಾಶಕ್ಕೆ ಆಸೆಗಳೇ ಕಾರಣವಾಗಿವೆ.
ಮನುಷ್ಯ ನೆಮ್ಮದಿಯ ಬದುಕು ಕಟ್ಟಬೇಕಿದ್ದಲ್ಲಿ ಹನ್ನೆರಡನೇ ಶತಮಾನದ ವಚನಕಾರರ ತತ್ವ ಆದರ್ಶಗಳ ಪಾಲನೆಯೇ ಮೂಲ ಆಶಯವಾಗಬೇಕೆಂದು ಕುಶಾಲನಗರದ ಮಹಾತ್ಮಗಾಂಧಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಶ್ರೀ ಗುರುಚನ್ನಬಸವ ಶಿವಾಚಾರ್ಯರ ದತ್ತಿ ಕಾರ್ಯಕ್ರಮ ” ಶರಣ ಸಂಸ್ಕ್ರತಿ ಪ್ರಸಾರ ಗೋಷ್ಠಿ ” ಉದ್ಘಾಟಿಸಿ ಮಾತನಾಡಿದ ಅವರು ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ನಡೆ ನುಡಿಗಳೆರಡು ಒಂದಾಗಿಸಿಕೊಂಡ ಎಲ್ಲಾ ಜಾತಿ ಸಮುದಾಯಗಳ ವಚನಕಾರರನ್ನು ಸೇರಿಸಿ ನಾಡಿಗೆ ಸಾರಿದ ಸಂದೇಶಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ಜನ ಹಿತ ಹಾಗೂ ಲೋಕ ಹಿತ ಅಗ್ರಪಂತಿಯಲ್ಲಿರುತ್ತದೆ ಎಂದು ವಚನಗಳ ಮೂಲಕ ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಟ್ಟರು.
” ಶರಣ ಸಂಸ್ಕ್ರತಿ – ಪ್ರಸಾರ ” ಪ್ರವಚನ ನೆರವೇರಿಸಿದ ಕುಶಾಲನಗರದ ಸಾಹಿತಿ ಹಾಗೂ ಕವಯತ್ರಿ ಲೀಲಾಕುಮಾರಿ ತೊಡಿಕಾನ, ಮನುಷ್ಯನ ದೇಹವೆಂಬ ಬಂಡಿಯನ್ನು ಓಡಿಸುವ ಪಂಚೇಂದ್ರಿಯಗಳನ್ನು ನಿಗ್ರಹಿಸುವ ಅಥವಾ ಸ್ವಯಂ ನಿಯಂತ್ರಿಸುವ ಶಕ್ತಿ ಮನುಷ್ಯನಿಗಿದ್ದರೆ ಆತನಿಗೆ ನೋವು, ಸಂಕಟಗಳೇ ಇರುವುದಿಲ್ಲ.
ಇವನಾರವ ಎನ್ನದೇ ಇವ ನಮ್ಮವ ನೆಂಬ ಅಭಿಮಾನವನ್ನು ಸರ್ವರೂ ಮನಗಾಣಬೇಕಿದೆ.
ಹನ್ನೆರಡನೇ ಶತಮಾನದಲ್ಲಿನ ಸಂಸ್ಕ್ರತ ಭಾಷೆ ಜನರಿಗೆ ಅರ್ಥವಾಗದಿದ್ದಾಗ ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿ ವಚನಗಳ ಮೂಲಕ ಲೋಕ ಸಂದೇಶ ಸಾರಿದ ಶರಣರ ನುಡಿಗಳು ಸಾರ್ವಕಾಲಿಕವಾಗಿ ಉಳಿಯಲಿವೆ.
ಇಂದಿನ ಮಕ್ಕಳು ಬಸವಣ್ಣನವರ ಕಲಬೇಡ ಕೊಲಬೇಡ ಎಂಬ ಒಂದೇ ಒಂದು ವಚನದ ಸಾರವನ್ನರಿತು ಅದರಂತೆ ನಡೆದಲ್ಲಿ ಮನುಷ್ಯನ ಬದುಕು ಸ್ವರ್ಗವಾಗುತ್ತದೆ ಎಂದು ಲೀಲಾಕುಮಾರಿ ಬಣ್ಣಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀದೇವಿ ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಪ್ರಗತಿ ಪರ ಕೃಷಿಕ ಸತ್ಯ,
ಶಾಲೆಯ ಸಂಗೀತ ಶಿಕ್ಷಕ ಪುಟ್ಟರಾಜು ಅಕ್ಕಮಹಾದೇವಿಯ ವಚನವನ್ನು ಸುಶ್ರಾವ್ಯವಾಗಿ ಹಾಡಿದರು.
ಕನ್ನಡ ಶಿಕ್ಷಕ ಕೆ.ಆರ್.ರಮೇಶ್ ನಿರೂಪಿಸಿದರು.
ಗಿರೀಶ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!