ಕುಶಾಲನಗರ, ಡಿ 24:
ಸಾಧನೆಗೆ ನೂರಾರು ಮಾರ್ಗಗಳು. ಸಾಧಕನಿಗೆ ಸಾಧಿಸಬೇಕೆಂಬ ಛಲ ಒಂದಿದ್ದರೆ ಕಲ್ಲನ್ನು ಶಿಲೆಯಾಗಿ ಅರಳಿಸಬಹುದು.
ಮಣ್ಣನ್ನು ಚಿನ್ನವಾಗಿಸಬಹುದು.
ಹಿಮಾಲಯ ಪರ್ವತ
ತಳದಲ್ಲಿ ನೋಡಿದರೆ ಅದನ್ನು ಏರಲು ಅಸದೃಶ ಹಾಗೂ ಅಗೋಚರ ಎನಿಸುತ್ತದೆ.
ಅದನ್ನು ಏರಲೇಬೇಕೆಂದು ಛಲ ತೊಟ್ಟಿ ಹೊರಟರೆ ಅದು ಸಾಧಕನ ಪಾದದ ತಳದಲ್ಲಿರುತ್ತದೆ.
ಇಂದಿನ ಯುವ ಶಕ್ತಿ ಸಾಧನೆಯ ಬೆನ್ನು ಹತ್ತುವ ಬದಲು ಸುಲಭ ಸಾಧ್ಯಗಳತ್ತ ಮುಖ ಮಾಡುತ್ತಿದೆ.
ಇದಕ್ಕೆ ತದ್ವಿರುದ್ದ ಎಂಬಂತೆ ಇಲ್ಲೊಬ್ಬ ಯುವ ಸಾಧಕನ ಬಗ್ಗೆ ಈ ಲೇಖನ.
ಪ್ರೌಢ ಶಿಕ್ಷಣದ ನಂತರದ ಕಾಲೇಜು ಶಿಕ್ಷಣ ಎಂಬುದು ಗಗನ ಕುಸುಮವಾಗಿ ಕೈಗೆಟುಕದೇ ಹೋದಾಗ ಜೀವನ ಎತ್ತ ? ಹೇಗೆ ? ಎಂಬ ಚಿಂತೆಗಳು ಆ ವ್ಯಕ್ತಿಯನ್ನು ಸುತ್ತುವರೆದು
ಕೆಲ ದಿನಗಳು ಅನ್ನಾಹಾರ, ನಿದ್ರೆ ಎಲ್ಲವನ್ನು ಕಸಿದು ಕೇಕೆ ಹಾಕುತ್ತವೆ.
ಮನೆಯಲ್ಲಿ ಕೃಷಿ ಕಾಯಕದ ಅಪ್ಪ ಅಮ್ಮ.
ವರುಷದ ಆದಾಯವೂ ಅಷ್ಟಕ್ಕಷ್ಟೆ.
ಏನು ಮಾಡುವುದು, ಎತ್ತ ಹೋಗುವುದು ಎಂದು ಯೋಚನಾ ಮಗ್ನನಾಗಿರುವಾಗ ದೂರದ ಬೆಂಗಳೂರು ಅಥವಾ ಮೈಸೂರು ನಗರಗಳಿಗಿಂತ ಈತನ ಜೀವನದ ಆಯ್ಕೆ ಕುಶಾಲನಗರ ಆಗಿರುತ್ತದೆ.
ಯಾವ ಯುವಕ ಕಾಲೇಜಿಗೆ ಹೋಗಲಾರದೆ, ಕಾಲೇಜು ಶಿಕ್ಷಣ ಕಲಿಯಲಾರದೆ ಅದು ನನ್ನಿಂದ ಅಸಾಧ್ಯ ಎಂದು ಬಾವಿಸುತ್ತಾನೋ….
ಅದೇ ವ್ಯಕ್ತಿ ಕಾಲೇಜೊಂದರ ಮಾಲೀಕನಾಗುವಷ್ಟು ಬೆಳೆಯುತ್ತಾನೆ.
ಬಡತನದ ಮನೆಯಲ್ಲಿ ನೋವುಂಡು ದಿನಗಳೆವ ಪೋಷಕರಿಗೆ ಹೊರೆಯಾಗುವ ಶಿಕ್ಷಣವೇ ಬೇಡ ಎಂಬ ನಿಶ್ಚಯ ಮಾಡಿದ ಆ ಯುವಕ ತಾನು ಕಟ್ಟಿದ ಕಾಲೇಜಿಗೆ ಸೇರಬೇಕೆಂಬ ಕನಸು ಕಟ್ಟಿ ಕಾಲೇಜಿನ ಫೀಜು ಕಟ್ಟಲಾಗದೇ ಪರಿತಪಿಸುವ ನೂರಾರು ಬಡ ಮಕ್ಕಳ ಪಾಲಿಗೆ ಕಾಮಧೇನು ಆಗುತ್ತಾನೆ ಈ ಸಾಧಕ.
ಕಳೆದ 25 ವರ್ಷಗಳ ಹಿಂದೆ ಜೀವನವನ್ನು ಅರಸಿ ಕುಶಾಲನಗರಕ್ಕೆ ಧಾವಿಸಿದ ಈ ಯುವಕ ಜೀವನ ಆರಂಭಿಸಿದ್ದು ಹೋಟೆಲ್ ನಲ್ಲಿ ಕಾಯಕ ಮಾಡುವ ಮೂಲಕ.
ಹೋಟೆಲ್ ನಲ್ಲಿ ಕಾರ್ಮಿಕನಾಗಿ ಕಾಯಕ ಮಾಡಿ ಪಡೆದ ಜೀವನಾನುಭವ ಸ್ವಂತದ್ದಾದ ಹೋಟೆಲ್ ಮಾಲೀಕನಾಗಿಸುತ್ತದೆ.
ಕ್ರಮೇಣ ಈ ಯುವ ಸಾಧಕನ ಹೋಟೆಲ್ ಗೆ ಊಟೋಪಹಾರಗಳಿಗೆಂದು ನಿತ್ಯವೂ ಬರುತ್ತಿದ್ದ ಕುಶಾಲನಗರದ ಕಾಲೇಜೊಂದರ ಮಂದಿ ಇವರ ಗುಣ ವಿಶೇಷಗಳನ್ನು ಕಂಡು ನಮ್ಮ ಕಾಲೇಜಿಗೆ ಟ್ರಸ್ಟಿಯಾಗ ಬನ್ನಿ.
ಆರ್ಥಿಕವಾಗಿ ಒಂದಷ್ಟು ಜೀವ ತುಂಬ ಬನ್ನಿ ಎಂಬ ಆಹ್ವಾನ ಈ ವ್ಯಕ್ತಿಯ ಬದುಕಿಗೆ ಒಂದು ಸೋಪಾನ ವಾಗುತ್ತದೆ.
ಹೇಗೆಂದರೆ, ಸ್ವತಃ ಅರೆಕಾಲಿಕ ವೃತ್ತಿಯ ಸಮಾನ ಮನಸ್ಕ ಐವರು ಉಪನ್ಯಾಸಕರ ತಂಡ ಕಟ್ಟಿ ಬೆಳೆಸುತ್ತಿದ್ದ ಕಾಲೇಜದು. ಬಾಡಿಗೆಯ ಕಟ್ಟಡದಲ್ಲಿ ಇದ್ದಂತಹ ಕಾಲೇಜದು.
ಕ್ರಮೇಣ ಈ ಕಾಲೇಜು ಸ್ಥಾಪಕ ಉಪನ್ಯಾಸಕರೆಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಾಲೇಜುಗಳತ್ತ ಮುಖ ಮಾಡಿದಾಗ ಈ ಯುವಕ ಕಾಲೇಜನ್ನು ವಹಿಸಿಕೊಳ್ಳುತ್ತಾರೆ.
ದಿನಗಳೆದಂತೆ ಸ್ವಂತದ್ದಾದ ಭೂಮಿಯನ್ನು ಕುಶಾಲನಗರ ಪಟ್ಟಣದೊಳಗೆ ಖರೀದಿಸುವ ಮೂಲಕ ಇತರರ ಹುಬ್ಬೇರುವಂತಹ ಬೃಹತ್ತಾದ ಕಾಲೇಜು ಕಟ್ಟಡವನ್ನು ನಿರ್ಮಿಸುತ್ತಾರೆ.
ಬಳಿಕ ಪ್ರಜ್ಞಾವಂತ ಹಾಗೂ ಪ್ರಬುದ್ಧ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಅವರಿಗೆ ಆಕರ್ಷಕವಾದ ವೇತನವನ್ನು ನೀಡುವ ಮೂಲಕ ಕುಶಾಲನಗರ ಸುತ್ತ ಮುತ್ತ ಮಾತ್ರವಲ್ಲ ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಈ ಕಾಲೇಜಿಗೆ ಬಂದು ಶಿಕ್ಷಣ ಪಡೆಯುತ್ತಿದ್ದಾರೆ.
ಅತ್ಯುತ್ತಮ ಉಪನ್ಯಾಸಕರು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಸಾಲಿನಲ್ಲಿ ಪ್ರಥಮವಾಗಿರುವ ಈ ವಿದ್ಯಾಸಂಸ್ಥೆಯ ಮಾಲೀಕ ಬೇರಾರು ಅಲ್ಲ ಶನಿವಾರಸಂತೆ ಮೂಲದ ಎನ್.ಎನ್.ಶಂಭುಲಿಂಗಪ್ಪ.
ಇವರ ಮಾಲೀಕತ್ವದ ವಿವೇಕಾನಂದ ಪಿಯು ಕಾಲೇಜು. ಹಾಗೂ ಮಹಾತ್ಮ ಗಾಂಧಿ ಪದವಿ ಕಾಲೇಜು ಸರಿ ಸುಮಾರು 700 ಕ್ಕೂ ಅಧಿಕ ವಿದ್ಯಾರ್ಥಿಗಳ ಪಾಲಿಗೆ ಸರಸ್ವತಿ ಮಂದಿರವಾಗಿದೆ.
ಈ ಕಾಲೇಜಿನಲ್ಲಿರುವ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಲ್ಲದೇ ಕುಶಾಲನಗರದ ಸಾಮಾಜಿಕ ಸೇವಾ ಸಂಸ್ಥೆಗಳ ಮಂದಿ ಅನೇಕ ಕಾರ್ಯಕ್ರಮಗಳು ಜರುತ್ತಿವೆ.
ಇಂತಹ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಎನ್.ಎನ್.ಶಂಭುಲಿಂಗಪ್ಪ ಕುಶಾಲನಗರದ ಬಹುತೇಕ ಹಿರಿಯ ಕಿರಿಯ ವಯಸ್ಸಿನ ಮಂದಿಗೆ ಪ್ರೀತಿಯ ಕುಮಾರಣ್ಣ ಎಂಬ ನಾಮಾಂಕಿರಾಗಿದ್ದಾರೆ.
ಇವರಿಗೆ ರಾಜ್ಯ ಮಟ್ಟದ ಸಂಸ್ಥೆಯೊಂದು ರಾಯಚೂರಿನಲ್ಲಿ ರಾಜ್ಯ ಮಟ್ಟದ ಸನ್ಮಾನ ಮಾಡುತ್ತಿರುವುದು ಇವರ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯ ಇಮ್ಮಡಿಗೆ ಕಲಶಪ್ರಾಯವಾಗಿದೆ.
ವಿಶೇಷ ಲೇಖನ : ಚಕ್ರವರ್ತಿ
ಕುಶಾಲನಗರ
Back to top button
error: Content is protected !!