ಕುಶಾಲನಗರ ನ. 22: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಂಡೆಬೆಟ್ಟದ ಹಾಡಿಯ ನಿವಾಸಿಗಳ ದೂರಿನ ಮೇರೆಗೆ ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷರ ತಂಡ ಭೇಟಿ ಸಮಸ್ಯೆಗಳನ್ನು ಆಲಿಸಿದರು.
ಬೆಂಡೆಬೆಟ್ಟದ ಹಾಡಿಯಲ್ಲಿ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊರತೆ ಮತ್ತು ಹೊಸ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳು ಇರುವುದರ ಬಗ್ಗೆ ಅಲ್ಲಿನ ನಿವಾಸಿಗಳು ದೂರಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯ ಸೋಮವಾರಪೇಟೆ ತಾಲ್ಲೂಕು ಅಧಿಕಾರಿ ಸಿದ್ದೇಗೌಡ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್, ಅಭಿವೃದ್ಧಿ ಅಧಿಕಾರಿ ಸಂತೋಷ್ ಖುದ್ದಾಗಿ ಹಾಡಿಗೆ ತೆರಳಿ ಅಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯದಲ್ಲಿ ತೊಡಗಿದರು.
ಈಗಾಗಲೇ ಇಲಾಖೆಯ ಮುಖೇನ ವರ್ಷಂಪ್ರತಿಯಂತೆ ಈ ಸಾಲಿನಲ್ಲಿ 10 ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ಮನೆಗಳು ಮಂಜೂರಾಗಿ ಸರಕಾರ ನಿಯಮಾನುಸಾರ ಫಲಾನುಭವಿಯೇ ಮನೆಯನ್ನು ನಿರ್ಮಿಸಿಕೊಳ್ಳಲು ಅವಕಾಶವನ್ನು ಒದಗಿಸಿದ್ದು ಅದರ ಹಣವು ಸಹ ನೇರವಾಗಿ ಅವರ ಖಾತೆಗೆ ಸೇರುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದೇಗೌಡ ತಿಳಿಸಿದರು.
ಗ್ರಾಮ ಪಂಚಾಯತಿ ವತಿಯಿಂದ ವಿದ್ಯುತ್ ಸೌಲಭ್ಯಗಳು ಇಲ್ಲದ ಮನೆಗಳಿಗೆ ಮನೆಗಳ ಸಂಖ್ಯೆಯನ್ನು ನೊಂದಣಿ ಮಾಡಿ ಸಂಬಂಧಿಸಿದ ಇಲಾಖೆಯ ಮೂಲಕ ಅತಿ ಶೀಘ್ರದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ದಿನೇಶ್, ಹಾಡಿ ನಿವಾಸಿಯಾದ ಹರೀಶ್, ಗಣೇಶ್, ರವಿ, ಅಜಿತ್, ಕೀರ್ತನ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.
Back to top button
error: Content is protected !!