ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ, ಸುವರ್ಣ ಸಂಭ್ರಮ:50 ಆಚರಣೆ
ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಗ್ರಾ.ಪಂ.ಅಧ್ಯಕ್ಷ ಭಾಸ್ಕರ್ ನಾಯಕ್
ಕುಶಾಲನಗರ, ನ.1:
ಕರ್ನಾಟಕ ರಾಜ್ಯೋತ್ಸವವು ಕನ್ನಡಿಗರಾದ ನಮ್ಮಲ್ಲಿ ನವೆಂಬರ್ ನಲ್ಲಿ ಜಾಗೃತವಾಗುವ ಕನ್ನಡ ಭಾಷಾ ಪ್ರೇಮವು ಇಡೀ ವರ್ಷದುದ್ದಕ್ಕೂ ನಿತ್ಯೋತ್ಸವ ಆದಲ್ಲಿ ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿ, ಪರಂಪರೆಯು ನಿಶ್ಚಯವಾಗಿಯೂ ಬೆಳೆಯಲು ಸಾಧ್ಯ ಎಂದು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಬುಧವಾರ ಕೂಡ್ಲೂರಿನಲ್ಲಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕುಶಾಲನಗರ ತಾಲ್ಲೂಕಿನ
ಕೂಡುಮಂಗಳೂರು ಗ್ರಾಮ ಪಂಚಾಯತಿ ಹಾಗೂ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ
ಶಾಲೆಯ ರಾಷ್ಟ್ರಕವಿ ಕುವೆಂಪು ಕನ್ನಡ ಭಾಷಾ ಸಂಘದ ವತಿಯಿಂದ
ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್., ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಎಸ್ ಡಿ ಎಂ ಸಿ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ
ಬುಧವಾರ ( ನ.1 ರಂದು) ಏರ್ಪಡಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ: 50 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ ಈಗ 50 ವರ್ಷ. ನಾಡಿನೆಲ್ಲೆಡೆ ಸುವರ್ಣ ಸಂಭ್ರಮ ಮನೆ ಮಾಡಿದೆ. ಈ ಅರ್ಧ ಶತಮಾನದಲ್ಲಿ ರಾಜ್ಯವು ಎಲ್ಲ ಕ್ಷೇತ್ರಗಳಲ್ಲಿಯೂ ಬೆಳೆದಿದೆ ಎಂದರು.
ಕನ್ನಡ ನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಿಸುವ ಮೂಲಕ ಕನ್ನಡ ಸಂಸ್ಕೃತಿಯನ್ನು ದೇಶದಲ್ಲಿ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಎಲ್ಲರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಮುಂದಿನ ಪೀಳಿಗೆಗೆ ಕರ್ನಾಟಕ ರಾಜ್ಯದ ಕುರಿತು ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು ಎಂಬುದು ಕನ್ಮಡ ರಾಜ್ಯೋತ್ಸವದ ಆಶಯವಾಗಿದೆ ಎಂದು ಭಾಸ್ಕರ್ ನಾಯಕ್ ಹೇಳಿದರು.
ಕನ್ನಡ ನಾಡು- ನುಡಿ ಸಂರಕ್ಷಣೆ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ: 50 ರ ಮಹತ್ವ ಕುರಿತು ಪ್ರಧಾನ ಭಾಷಣ ಮಾಡಿದ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ಮುಖ್ಯ ವ್ಯವಸ್ಥಾಪಕರೂ ಆದ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಸೂದನ ರತ್ನಾವತಿ ಮಾತನಾಡಿ,ವಿಶ್ವದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯು ತನ್ನ ಸಾಹಿತ್ಯ ಶ್ರೀಮಂತಿಕೆಯಿಂದ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇತರ ಯಾವುದೇ ಭಾಷೆಗಳಲ್ಲಿಯೂ ಇರದಂತಹ ಕಟ್ಟುನಿಟ್ಟಿನ ನಿಯಮಗಳಿರುವ ಛಂದೋಬದ್ಧ ರಚನೆಗಳನ್ನು ಕನ್ನಡ ಭಾಷೆಯಲ್ಲಿ ಮಾತ್ರ ನೋಡಬಹುದಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಕವನ ರಚನಾ ಸ್ಪರ್ಧೆ, ಕನ್ನಡದ ಆಶುಭಾಷಣ ಸ್ಪರ್ಧೆ,ಭಾಷಣ, ಪ್ರಬಂಧ ಸ್ಪರ್ಧೆ, ಕಥಾ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಶಾಲಾ ಮಕ್ಕಳು ಭಾಗವಹಿಸುವ ಮೂಲಕ ಬರೆಯುವ ಕೌಶಲ್ಯ ಬೆಳೆಸುವ ಪ್ರಯತ್ನವನ್ನು ಮಾಡಬಹುದು. ಮಕ್ಕಳಿಗಾಗಿ ಕನ್ನಡದ ನಿಯತಕಾಲಿಕಗಳಲ್ಲಿ ಕಥೆಗಳನ್ನು ಮಕ್ಕಳಿಂದ ಬರೆಸಿ ಕಳುಹಿಸುವುದು ಮೊದಲಾದ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಕನ್ನಡದಲ್ಲಿ ಆಸಕ್ತಿಯು ಹುಟ್ಟಿಸಬಹುದು ಎಂದರು.
ನಾಡಿನ ಭಾಷೆ ಉಳಿಸಿ ಬೆಳೆಸುವುದಕ್ಕೆ ಸರ್ಕಾರದ ಜತೆಗೆ ನಾಡಿನ ಜನರು ಕೈಜೋಡಿಸಬೇಕು ಎಂದು ಸೂದನ ರತ್ನಾವತಿ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಸುವರ್ಣ ಕರ್ನಾಟಕ ಹಬ್ಬವನ್ನು ವರ್ಷವಿಡೀ
ಮನೆಮನೆಗಳಲ್ಲಿ ಸೇರಿದಂತೆ ಎಲ್ಲೆಡೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಸುವರ್ಣ
ಸಂಭ್ರಮದ ಆಚರಣೆಗೆ ಸಿದ್ಧತೆ ನಡೆಸಲಾಗಿದೆ ಎಂದರು.
ಕ.ಸಾ.ಪ.ಹೆಬ್ಬಾಲೆ ವಲಯ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಸಿ.ಆರ್.ಪಿ. ಕೆ.ಶಾಂತಕುಮಾರ್, ಜಾನಪದ ಕಲಾವಿದ ಬರ್ಮಣ್ಣ ಬೆಟ್ಟಗೇರಿ ಮಾತನಾಡಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕ.ಸಾ.ಪ.ಸಮಿತಿ ಸದಸ್ಯರಾದ ಲೀಲಾಕುಮಾರಿ ತೊಡಿಕಾನ, ಡಿ.ಎಸ್.ಸೋಮಶೇಖರ್, ಗ್ರಾಮ ಪಂಚಾಯತಿ ಪಿಡಿಓ ಎಂ.ಆರ್.ಸಂತೋಷ್, ಲೆಕ್ಕಾಧಿಕಾರಿ ಎಸ್.ಎಸ್. ಮಮತ, ಸಿಬ್ಬಂದಿ ಅವಿನಾಶ್, ಎಸ್ ಡಿ ಎಂ.ಸಿ.ಮಾಜಿ ಅಧ್ಯಕ್ಷ ಎಸ್.ಎಂ.ಪುಟ್ಟಸ್ವಾಮಿ,
ಸದಸ್ಯರಾದ ಎಂ.ನಾಗರಾಜ್, ಡಿ.ವೈ. ಶೃತಿ, ಕೃಷಿಕರಾದ ಕೆ.ಎಸ್.ರಾಜಾಚಾರಿ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್ ಇತರರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಾದ ಕೆ.ಎಂ.ಮದನ್ ಮತ್ತು ಸ್ಪಂದನ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ ಸ್ವಾಗತಿಸಿದರು. ವಿದ್ಯಾರ್ಥಿನಿ ಭೂಮಿಕಾ ಮತ್ತು ತಂಡದ ವತಿಯಿಂದ ಗೀತಾ ಗಾಯನ ನಡೆಸಿಕೊಡಲಾಯಿತು.
ವಿದ್ಯಾರ್ಥಿಗಳಾದ ಭೂಮಿಕ ಮತ್ತು ತಂಡದ ವತಿಯಿಂದ ನಾಡು- ನುಡಿಗೆ ಸಂಬಂಧಿಸಿದಂತೆ ಪ್ರದರ್ಶಿಸಿದ
ಜನಪದ ಹಾಗೂ ಸಾಂಸ್ಕೃತಿಕ ನೃತ್ಯ
ಪ್ರೇಕ್ಷಕರ ಗಮನ ಸೆಳೆಯಿತು.
ಕಲಾವಿದ ಬರ್ಮಣ್ಣ ಬೆಟ್ಟಗೇರಿ ಗೀತೆ ಹಾಡಿದರು.