ಶಿಕ್ಷಣ

ಕನ್ನಡದಲ್ಲಿ ಸಹಿ ಮಾಡುವುದನ್ನು ರೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಬಿ.ಆರ್.ನಾರಾಯಣ್ ಕರೆ

ಕುಶಾಲನಗರ, ಮೇ 13: ಪ್ರತಿಯೊಬ್ಬರು ತಮ್ಮ ಹಸ್ತಾಕ್ಷರಗಳನ್ನು ಕನ್ನಡದಲ್ಲಿ ಬರೆಯುವುದನ್ನು ರೂಢಿ ಮಾಡಿಕೊಳ್ಳುವ ಮೂಲಕ ಮಾತೃಭಾಷೆಯನ್ನು ಸದಾ ಕಾಲ ಪ್ರೀತಿಸಬೇಕೆಂದು ಕುಶಾಲನಗರದ ಹಿರಿಯ ಸಾಹಿತಿ ಬಿ.ಆರ್.ನಾರಾಯಣ್ ಕರೆಕೊಟ್ಟರು.

ಸಾಹಿತ್ಯಾಸಕ್ತರ ವೇದಿಕೆ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಐಚ್ಛಿಕ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕುಶಾಲನಗರದ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅನುಗ್ರಹ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ಮಾನವೀಯ ಮೌಲ್ಯಗಳನ್ನು ಕರಗತ ಮಾಡಿಕೊಳ್ಳಬೇಕಿದೆ.
ಇತ್ತೀಚಿನ ಆಧುನಿಕ ಜೀವನ ಶೈಲಿಗೆ ಮಾರುಹೋಗುತ್ತಿರುವ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರಗಳು ಹಾಗೂ ಮರೆಯಾಗುತ್ತಿರುವ ಮೌಲ್ಯಗಳನ್ನು ಪೋಷಿಸಲು ಕರೆಕೊಟ್ಟರು.

ಸಾಹಿತಿ ಕಣಿವೆ ಭಾರಧ್ವಜ್ ಕೆ.ಆನಂದ ತೀರ್ಥ ಮಾತನಾಡಿ, ಇತರರು ಅಸೂಯೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದ ಮೂಲಕ ಗುರಿಮುಟ್ಟಬೇಕೆಂದರು.

ಅನುಗ್ರಹ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಸಾಧಿಸುವ ಛಲ ವಿರಬೇಕು.
ಪಠ್ಯದಷ್ಟೇ ಸಾಮಾಜಿಕ ಮೌಲ್ಯಗಳ ರಕ್ಷಣೆಗೂ ಮುಂದಾಗಬೇಕೆಂದು ಕರೆಕೊಟ್ಟರು.

ಸಾಹಿತ್ಯಾಸಕ್ತರ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಶಾಲನಗರದ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ.ರಾಜೇಶ್, ಸಾಹಿತ್ಯ ಪ್ರೇಮಿ ಸುಗುರಾಜ್ ಇದ್ದರು.

ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ 60 ಕ್ಕೂ ಹೆಚ್ಚಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅನುಗ್ರಹ ವಿದ್ಯಾಸಂಸ್ಥೆಯ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ,
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕೋಶಾಧಿಕಾರಿ ಪರಮೇಶ್, ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್, ಉಪನ್ಯಾಸಕಿ ಸ್ಮಿತಾ, ವೀರಶೈವ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಲಿಂಗ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!