ಪ್ರತಿಭಟನೆ

ಗೋಣಿಕೊಪ್ಪದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಕುಶಾಲನಗರ, ಮಾ 16:
ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಅಂಬೇಡ್ಕರ್ ಭಾವಚಿತ್ರದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಪ್ಪಲಿ ಇರುವ ರೀತಿಯಲ್ಲಿ ಕಟ್ ಔಟ್ ಅಳವಡಿಸಿದ ಪ್ರಕರಣ ಖಂಡಿಸಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷ ದುರಾಡಳಿತ, ಭ್ರಷ್ಟಾಚಾರ ಮತ್ತು ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಪಿ.ಶಶಿಧರ್, ಸಮಾನತೆ ಪ್ರತಿಪಾದಿಸಿದ ಅಂಬೇಡ್ಕರ್ ಅವರ ವಿರುದ್ದ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿ ತನ್ನ ದ್ವೇಷ ಕಾರಿದೆ. ಗೋಣಿಕೊಪ್ಪದಲ್ಲಿ ಸಂವಿಧಾನ ಕ್ಕೆ ಅಪಚಾರವಾಗುವಂತಹ ಲಜ್ಜೆಗೇಡಿತನ ಕೃತ್ಯವನ್ನು ಬಿಜೆಪಿ ನಡೆಸಿದೆ‌.
ವಿಶ್ವದಲ್ಲಿ ಶ್ರೇಷ್ಠ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಗರಿಗೆ ಗೌರವಿಲ್ಲ. ಸಂವಿಧಾನ ಬದಲಿಸುವ ಹೇಳಿಕೆ ನೀಡಿದ ಬಿಜೆಪಿ ಮತ್ತೊಮ್ಮೆ ತನ್ನ ನಿಜರೂಪ ಪ್ರದರ್ಶಿಸಿದೆ. ಘಟನೆ ಬಗ್ಗೆ ಯಾವೊಬ್ಬ ಬಿಜೆಪಿ ಮುಖಂಡ ಕೂಡ ಪ್ರತಿಕ್ರಿಯಿಸಿಲ್ಲ.
ಕೂಡಲೆ ಘಟನೆ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ‌ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ,
ದಲಿತರ ಮನೆ ಮನೆಗೆ ತೆರಳಿ ಬಿಜೆಪಿಯ ಮನಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ‌ಕೆಪಿಸಿಸಿ ಸದಸ್ಯ
ಮಂಜುನಾಥ್ ಗುಂಡೂರಾವ್, ಪ್ರಮುಖರಾದ ಅಬ್ದುಲ್ ಖಾದರ್, ಬಿ.ಡಿ. ಅಣ್ಣಯ್ಯ, ಮುಳ್ಳುಸೋಗೆ ಹರೀಶ್, ಮುಸ್ತಾಪ, ಗೊಂದಿಬಸವನಹಳ್ಳಿ ಪ್ರಕಾಶ್, ನವೀನ್, ಶಾಂತಪ್ಪ, ಚಂದ್ರು, ಅಜಿತ್, ನವೀನ್, ರಮೇಶ್, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!