ಕೂಡ್ಲೂರು ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆ: ಶಾಲಾ ಮಕ್ಕಳು, ಶಿಕ್ಷಕರು ಭಾಗಿ:

ಕುಶಾಲನಗರ ನ.19:
ಕೊಡಗು ಜಿಲ್ಲಾ ಪಂಚಾಯತಿಯ ಸ್ವಚ್ಛ ಭಾರತ್ ಅಭಿಯಾನ ದಡಿ ಸೋಮವಾರಪೇಟೆ ತಾಲ್ಲೂಕು ಪಂಚಾಯತಿ ಸಹಯೋಗದೊಂದಿಗೆ ಕೂಡುಮಂಗಳೂರು
ಗ್ರಾಮ ಪಂಚಾಯತಿ ಹಾಗೂ ಕೂಡುಮಂಗಳೂರು
ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ,
ಎನ್.ಎಸ್.ಎಸ್.ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ, ಸೀಕೋ ಸಂಸ್ಥೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ವತಿಯಿಂದ ನ.19( ಶನಿವಾರ) ರಂದು ಕೂಡ್ಲೂರು ಗ್ರಾಮದಲ್ಲಿ
ವಿಶ್ವ ಶೌಚಾಲಯ ದಿನ: 2022 ವನ್ನು ಆಚರಿಸಲಾಯಿತು.
ವಿಶ್ವ ಶೌಚಾಲಯ ದಿನದ ಮಹತ್ವ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹಸಿರು ಪಡೆಯ ಕೊಡಗು ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್,
ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ಈ ದಿನದ ಗುರಿಯಾಗಿದೆ.
ನಾವು ಪ್ರತಿನಿತ್ಯ ಬಳಸುವ ಶೌಚಾಲಯವನ್ನು ನಾವು ಬಳಸಿದ ನಂತರ ಸ್ವತಃ ನಾವೇ ಸ್ವಚ್ಛಗೊಳಿಸುವ ಮೂಲಕ ಶೌಚಾಲಯವನ್ನು ಸ್ವಚ್ಛತೆ ಮತ್ತು ನೈರ್ಮಲ್ಯದಿಂದ ಬಳಕೆ ಮಾಡಿದರೆ
ಉತ್ತಮ ಆರೋಗ್ಯ ಹಾಗೂ ಯೋಗಕ್ಷೇಮ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸ್ವಚ್ಛ ಶಾಲೆ, ಸ್ವಚ್ಛ ಶೌಚಾಲಯ, ಸ್ವಚ್ಛ ಗ್ರಾಮ ಪರಿಕಲ್ಪನೆಯ ಮಹತ್ವ ಕುರಿತು ತಿಳಿಸಿದ ಟಿ.ಜಿ.ಪ್ರೇಮಕುಮಾರ್, ಜನರಲ್ಲಿ ಶೌಚಾಲಯದ
ಸ್ವಚ್ಛತೆಯೊಂದಿಗೆ ಸಮುದಾಯದಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಸ್ವಚ್ಛತಾ ಓಟ ಹಾಗೂ ಜನಜಾಗೃತಿ ಜಾಥಾ ನಡೆಸುವ ಮೂಲಕ ಶೌಚಾಲಯದ ಬಳಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವಿಶ್ವ ಶೌಚಾಲಯ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ವಚ್ಛತಾ ಓಟ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಪ್ರತಿಯೊಬ್ಬರೂ ಪ್ರತಿನಿತ್ಯ ಶೌಚಾಲಯ ಬಳಕೆ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.
ಗ್ರಾಮ ಪಂಚಾಯತಿ ವತಿಯಿಂದ ಬಯಲು ಶೌಚಾಲಯ ಮುಕ್ತಗೊಳಿಸುವ ಮೂಲಕ ಎಲ್ಲರಿಗೂ ಉತ್ತಮ ಆರೋಗ್ಯ ರಕ್ಷಣೆಗೆ ಪಣ ತೊಡಲಾಗುತ್ತಿದೆ. ಜನರಲ್ಲಿ ಶೌಚಾಲಯ ಬಳಕೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ದಿನದ ಉದ್ದೇಶದ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಮಾತನಾಡಿ, ನಾವು ಈಗ ತಾಂತ್ರಿಕವಾಗಿ ಹೆಚ್ಚು ಪ್ರಗತಿ ಹೊಂದುತ್ತಿದ್ದರೂ ಭಾರತ ಸೇರಿದಂತೆ
ಇನ್ನೂ ಹಲವು ದೇಶಗಳಲ್ಲಿ ಬಯಲು ಶೌಚಾಲಯಗಳಿಂದ ಮುಕ್ತವಾಗಿಲ್ಲದಿರುವುದು ಅದರಲ್ಲೂ ಹೆಣ್ಣು ಮಕ್ಕಳಿಗೆ ಸಾಮಾಜಿಕವಾಗಿ
ಹೆಚ್ಚು ಮುಜುಗರವಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ, ನಾವು ಬಯಲು ಶೌಚಾಲಯ ಬಳಕೆಯಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳಿಂದ ಮುಕ್ತಿಹೊಂದಿ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಶೌಚಾಲಯವನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಪ್ರೌಢಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಅನ್ಸಿಲಾ ರೇಖಾ,
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎಸ್.ಸುಜಾತ, ಪಂಚಾಯತಿ ಸಿಬ್ಬಂದಿಗಳಾದ ಎಂ.ಎಲ್.ಅವಿನಾಶ್, ಮಮತ, ಶಿಕ್ಷಕರು, ಪಂಚಾಯತಿ ನೌಕರರು ಇದ್ದರು.
ಸ್ವಚ್ಛತಾ ಓಟ, ಜಾಗೃತಿ ಜಾಥಾ:
ಇದೇ ವೇಳೆಯಲ್ಲಿ ಶಾಲಾ ಮೈದಾನದಲ್ಲಿ ಸ್ವಚ್ಛತೆಗಾಗಿ ಓಟ ನಡೆಸಲಾಯಿತು.
ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ
ವಿದ್ಯಾರ್ಥಿಗಳು ಕೂಡ್ಲೂರು ಗ್ರಾಮದಲ್ಲಿ ಜಾಥಾ ನಡೆಸುವ ಮೂಲಕ
ಶೌಚಾಲಯದ
ಸ್ವಚ್ಛತೆ, ಆರೋಗ್ಯ ಹಾಗೂ ನೈರ್ಮಲ್ಯದ ಕುರಿತಾದ ಭಿತ್ತಿಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಿದರು.
ನಂತರ ಕೂಡ್ಲೂರು ಗ್ರಾಮದಲ್ಲಿ ವಿಶ್ವ ಶೌಚಾಲಯದ ದಿನ ಮಹತ್ವ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.
ವಿಶ್ವ ಶೌಚಾಲಯ ದಿನದ ಅಂಗವಾಗಿ ಶಾಲಾ ಮೈದಾನದಲ್ಲಿ ಮಕ್ಕಳಿಗೆ ಸ್ವಚ್ಛತಾ ಓಟವನ್ನು ಹಮ್ಮಿಕೊಳ್ಳಲಾಯಿತು.
ನಂತರ ಶಾಲೆಯಿಂದ
ಕೂಡ್ಲೂರು ಗ್ರಾಮದಲ್ಲಿ
ಜಾಗೃತಿ ಜಾಥಾ ನಡೆಸಿದ ಮಕ್ಕಳು ಭಿತ್ತಿಫಲಕಗಳನ್ನು ಹಿಡಿದು ಜನರಲ್ಲಿ ಶೌಚಾಲಯ ಬಳಕೆಯ ಮಹತ್ವ ಕುರಿತು ಜಾಗೃತಿ ಮಂಡಿಸಲಾಯಿತು.
ವಿದ್ಯಾರ್ಥಿಗಳು ಜಾಥಾದಲ್ಲಿ ಸ್ವಚ್ಛತೆಯೇ ಸೇವೆ, ಸ್ವಚ್ಚತೆ ಇದ್ದಲ್ಲಿ ಆರೋಗ್ಯ,
ಶೌಚಾಲಯ ಬಳಸಿ – ಆರೋಗ್ಯ ರಕ್ಷಿಸಿ, ಬಯಲು ಶೌಚಾಲಯ ಮುಕ್ತಗೊಳಿಸೋಣ ಬನ್ನಿ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಿದರು.
ದಿನದ ಅಂಗವಾಗಿ ಮಕ್ಕಳಿಗೆ ಶೌಚಾಲಯದ ಮಾದರಿ ತಯಾರಿಕೆ , ಚಿತ್ರಕಲಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
–+++++–++++++



