ಕಾರ್ಯಕ್ರಮ
ಕುಶಾಲನಗರದಲ್ಲಿ ತಾಲೂಕು ಆಡಳಿತದಿಂದ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ

ಕುಶಾಲನಗರ, ನ 09: ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲಾಡಳಿತದ ಸೂಚನೆ ಮೇರೆಗೆ ಕುಶಾಲನಗರ ತಾಲೂಕು ಆಡಳಿತದಿಂದ ಮತದಾನ ಜಾಗೃತಿ ಜಾಥಾ ಕುಶಾಲನಗರದಲ್ಲಿ ನಡೆಯಿತು.
ತಾಲೂಕು ತಹಶೀಲ್ದಾರ್ ಕಛೇರಿ ಸಿಬ್ಬಂದಿಗಳು, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಜಾಗೃತಿ ಫಲಕ ಹಿಡಿದು ಘೋಷಣೆ ಕೂಗುವ ಮೂಲಕ ಅರಿವು ಮೂಡಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಅವರು, ಮತದಾನಕ್ಕೆ ಅರ್ಹರಾದ ಪ್ರತಿಯೊಬ್ಬ ಪ್ರಜೆ ಕೂಡ ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿದೆ. ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಮತದಾರರು ಪರಿಶೀಲಿಸಿ ತಿದ್ದಪಡಿಗೆ ನ.09 ರಿಂದ ಡಿ.8 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭ ಉಪ ತಹಶೀಲ್ದಾರ್ ಮಧುಸೂದನ್, ಗ್ರಾಮ ಲೆಕ್ಕಿಗ ಗೌತಮ್ ಮತ್ತು ಸಿಬ್ಬಂದಿಗಳು ಇದ್ದರು.



