ಕಾರ್ಯಕ್ರಮ

ನಿವೃತ್ತ ನೌಕರರ ಕೂಟದ 4 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಕುಶಾಲನಗರ, ನ 09: ಜೀವನ ಮೌಲ್ಯಗಳ ಮಾನ್ಯತೆ ಕುಸಿಯುತ್ತಿದೆ. ಹಾಗಾಗಿ ಯುವ ಜನಾಂಗಕ್ಕೆ ಮಾನವೀಯ ಮೌಲ್ಯಗಳ ಅರಿವು ಮೂಡಿಸಬೇಕು ಎಂದು ನಿವೃತ್ತ ನೌಕರರ ಕೂಟದ ಅಧ್ಯಕ್ಷ ಪುಲಿಯಂಡ ಚಂಗಪ್ಪ ಹೇಳಿದರು.
ನಿವೃತ್ತ ನೌಕರರ ಕೂಟದ 4 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಪಟ್ಟಣದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಿವೃತ್ತ ನೌಕರರ ಕೂಟದ ಅಧ್ಯಕ್ಷ ಪುಲಿಯಂಡ ಚಂಗಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಾಗರಿಕ ಸಮಾಜದಲ್ಲಿರುವ ಪ್ರತಿಯೊಬ್ಬರು ಅನುಭವಿಗಳ ಮಾತುಗಳನ್ನು ಅರಿತುಕೊಳ್ಳಬೇಕು. ಜೀವಿತ ಕಾಲದಲ್ಲಿ ಸಾಕಷ್ಟು ಅನುಭವಗಳು ಹಿರಿಯರಲ್ಲಿ ಕಾಣಲು ಸಾಧ್ಯ. ಅವರು ನೀಡುವ ಚಿಂತನೆಗಳು ಯಾವುದೇ ಪುಸ್ತಕದಲ್ಲಿ ಸಿಕ್ಕುವುದಿಲ್ಲ. ಸಾಮಾಜಿಕ ಬದಲಾವಣೆಗೆ ಹಿರಿಯರ ಪಾತ್ರ ಸಾಕಷ್ಟು ಇದೆ. ಹಾಗಾಗಿ ಇಂದಿನ ಯುವಕರು ಹಿರಿಯರನ್ನು ಗೌರವಿಸುವುದರ ಜತೆಗೆ ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ನಂತರ ನಿವೃತ್ತ ನೌಕರರ ಕೂಟದ ನಿಕಟ ಪೂರ್ವ ಕಾರ್ಯದರ್ಶಿ ಸುಂದರ್ ಮಾತನಾಡಿ, ನೌಕರರಿಗೆ ನಿವೃತ್ತಿ ಎನ್ನುವುದಿಲ್ಲ. ಕೆಲಸದಿಂದ ನಿವೃತ್ತಿ ಹೊಂದಿದ ತಕ್ಷಣ ಜೀವನವಿಲ್ಲ ಎನ್ನುವಂತಿಲ್ಲ. ನೌಕರರಾಗಿ ನಿವೃತ್ತಿ ಬಳಿಕವು ಉತ್ತಮ ಜನ ಸೇವೆ ಮಾಡಲು ಅವಕಾಶವಿದೆ. ನಮ್ಮಲ್ಲಿರುವ ಅನುಭವ ಸದ್ಬಳಕೆ ಮಾಡಿಕೊಂಡು ಜನರಿಗೆ ಮಾರ್ಗದರ್ಶನ ಮಾಡಲು ನಿವೃತ್ತ ನೌಕರರ ಕೂಟ ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭ ನಿವೃತ್ತ ನೌಕರರು ಸೇವೆಯಲ್ಲಿದ್ದಾಗ ಪ್ರಶಸ್ತಿ ಪಡೆದವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ಕೂಟದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆದವು.
ಹೌಸಿ ಹೌಸಿ ಗೇಮ್ ನಲ್ಲಿ ಕೂಟದ ಸದಸ್ಯ ಮರಿಯಪ್ಪ
ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಪಡೆದರು.
ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ತುಳಸಿ ಸುಬ್ರಮಣಿ ಪ್ರಥಮ ಬಹುಮಾನ,
ಸೀತಮ್ಮ ಚಂಗಪ್ಪ ದ್ವಿತೀಯ ಬಹುಮಾನ ಪಡೆದರು.
ಈ ಸಂದರ್ಭ ಕೂಟದ ಕಾರ್ಯದರ್ಶಿ ಎಸ್.ಎಸ್. ನಾಗರಾಜು, ನಿರ್ದೇಶಕರಾದ ಕೆ.ಜಿ.ಮುಕುಂದ, ಕೆ.ಟಿ.ಅಶೋಕ್, ಕೆ.ಎ. ಸುಬ್ರಮಣಿ, ಎನ್.ಎ. ಈರಪ್ಪ, ಹೆಚ್.ಎಸ್. ಗುಡ್ಡಪ್ಪ, ಸೀತಾರಾಮ್ ರೈ, ಬಿ.ಹೆಚ್. ರಮೇಶ್, ಹೆಚ್.ಎಸ್.ರಾಜಶೇಖರ್, ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!