ಆರೋಪ

ಮೂಲಸೌಕರ್ಯ ಕೊರತೆ: ಮಹಿಳೆಯಿಂದ ಚುನಾವಣೆ ಬಹಿಷ್ಕಾರ, ಕಂದಾಯ ಪಾವತಿಗೆ ನಕಾರ

ಕುಶಾಲನಗರ, ಜ 29: ಮೂಲಸೌಕರ್ಯ ಕಲ್ಪಿಸದ‌ ಕಾರಣ ಮಹಿಳೆಯೊಬ್ಬರು ಕಂದಾಯ ಪಾವತಿಗೆ ನಿರಾಕರಿಸಿದ್ದು ಮತದಾನ ಮಾಡದಂತೆ ತೀರ್ಮಾನಿಸಿರುವುದಾಗಿ ಘೋಷಣೆ ಮಾಡಿದ ಪ್ರಕರಣ ನಡೆದಿದೆ.

ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ರಸಲ್ ಪುರದ ಅಬ್ದುಲ್ ಅಜೀಜ್ ಮೂಲೆಯ ಮುನಿಸ್ವಾಮಿ ಮನೆಯಿಂದ ತಮ್ಮ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ದುರಾವಸ್ಥೆಯಿಂದ ಕೂಡಿದೆ. ಈ ಬಗ್ಗೆ ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಲ್ಲಿನ ನಿವಾಸಿ ಇಂದಿರಾ ನಾಣಯ್ಯ ಆರೋಪಿಸಿದ್ದಾರೆ.
ನೀರಾವರಿ ನಿಗಮಕ್ಕೆ‌ ಒಳಪಡುವ ರಸ್ತೆಯ ಅಭಿವೃದ್ಧಿ ಹೊಣೆಗಾರಿಕೆ ಬಗ್ಗೆ ಇತ್ತೀಚೆಗೆ ನಡೆದ ಗುಡ್ಡೆಹೊಸೂರು ಗ್ರಾಮಸಭೆಯಲ್ಲಿ ಪ್ರಶ್ನಿಸಿದ ಸಂದರ್ಭ ಸ್ಥಳೀಯ ಆಡಳಿತ ಕೂಡ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದು ಎಂಬುದಾಗಿ ನಿಗಮದ ಅಧಿಕಾರಿ ತಿಳಿಸಿದ್ದಾರೆ. ಇದರನ್ವಯ ಅಭಿವೃದ್ಧಿ ಕಾರ್ಯ ಮಾಡಬೇಕಾದ ಗ್ರಾಮಪಂಚಾಯ್ತಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ.
ನಾಲೆ ಏರಿ ಮೇಲೆ ವಾಸವಾಗಿರುವ ನಮಗೆ ಸಮರ್ಪಕ ರಸ್ತೆಯಿಲ್ಲ, ಇರುವ ಮಾರ್ಗ ಗುಂಡಿಗಳಿಂದ ಕೂಡಿದ್ದು ಅದೂ ಕೂಡ ಕಾಡುಪಾಲಾಗಿದೆ. ಬೀದಿ ದೀಪ ಇಲ್ಲ. ಮಳೆಗಾಲದಲ್ಲಿ ಪರಿಸ್ಥಿತಿ ತೀರಾ ಹದಗೆಡುತ್ತದೆ. ಆಟೋ ಗಳು ಕೂಡ ನಮ್ಮ‌ ಮನೆಯತ್ತ ಬರುವುದಿಲ್ಲ. ಈ ಎಲ್ಲಾ
ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರೂ ಗ್ರಾಪಂ ಮೌನ ವಹಿಸಿದೆ. ಒಂದು ಮನೆಯವರಿಗಾಗಿ ಏಕೆ ಅಭಿವೃದ್ಧಿ ಯೋಜನೆ ಎಂದು ಅಸಡ್ಡೆ ತೋರುತ್ತಿದ್ದಾರೆ ಎಂದು ಆರೋಪಿಸಿದ ಇಂದಿರಾ ಅವರು,
ಮೂಲ ಸೌಕರ್ಯ ಒದಗಿಸುವ ತನಕ ಪಂಚಾಯಿತಿಗೆ ಕಂದಾಯ ಪಾವತಿ ಮಾಡುವುದಿಲ್ಲ ಹಾಗೂ ಮುಂಬರುವ ಚುನಾವಣೆ‌ ಬಹಿಷ್ಕಾರದ ನಿರ್ಧಾರ ಕೈಗೊಂಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣ ಪುಟ್ಟ ಅಭಿವೃದ್ಧಿ ವಿಚಾರಗಳಿಗೆ ಶಾಸಕರನ್ನೇ ಅವಲಂಬಿಸಬೇಕಾದರೆ ಗ್ರಾಮ ಆಡಳಿತ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!