ಪ್ರಕಟಣೆ

4–5 ತಿಂಗಳಿಂದ ಪಿಂಚಣಿ ಬಾರದಿರುವುದು ಖಂಡನೀಯ: ತಕ್ಷಣ ಬಾಕಿ ಹಣ ಬಿಡುಗಡೆ ಮಾಡಿ – ಭಾಸ್ಕರ್ ನಾಯಕ್ ಆಗ್ರಹ

ಕುಶಾಲನಗರ, ಅ 01: ವಯೋವೃದ್ಧರ ಪಿಂಚಣಿ, ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ಕಳೆದ 4–5 ತಿಂಗಳಿಂದ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆಯದೆ, ಬಡವರು ಮತ್ತು ಅಶಕ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಜನಪರ ಹೋರಾಟಗಾರ ಭಾಸ್ಕರ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಂಚಣಿಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿರುವ ವಯೋವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ತಮ್ಮ ದಿನನಿತ್ಯದ ಆಹಾರ, ಔಷಧಿ ಮತ್ತು ಇತರ ಮೂಲಭೂತ ಅಗತ್ಯಗಳನ್ನು ಪೂರೈಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಂಚಣಿ ಹಣಕ್ಕಾಗಿ ಪ್ರತಿದಿನ ತಹಶೀಲ್ದಾರ್ ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ.
ಅಧಿಕಾರಿಗಳ ಕಚೇರಿಗೆ ತೆರಳಿ ಪಿಂಚಣಿ ಕುರಿತು ವಿಚಾರಿಸಿದರೂ ಸಮರ್ಪಕ ಮಾಹಿತಿ ಸಿಗದೆ, ಫಲಾನುಭವಿಗಳು ಮತ್ತೆ ಮತ್ತೆ ಕಚೇರಿಗೆ ಬರುವಂತಾಗಿದೆ. ಈಗಾಗಲೇ ವಯೋವೃದ್ಧರು ಮತ್ತು ಅಂಗವಿಕಲರಿಗೆ ಓಡಾಡುವುದೇ ಕಷ್ಟವಾಗಿದ್ದು, ಇಂತಹವರನ್ನು ತಿಂಗಳುಗಟ್ಟಲೆ ಕಚೇರಿಗೆ ಅಲೆದಾಡಿಸುವುದು ಸರಿಯಾದ ಆಡಳಿತ ವ್ಯವಸ್ಥೆಯಲ್ಲ.
ಸಾಮಾಜಿಕ ಭದ್ರತಾ ಪಿಂಚಣಿಗಳು ಸರ್ಕಾರದ ದಯೆಯಿಂದ ನೀಡುವ ಹಣವಲ್ಲ; ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯಡಿ ದೊರೆಯಬೇಕಾದ ಹಕ್ಕಿನ ನೆರವಾಗಿದೆ. ಹೀಗಿರುವಾಗ 4–5 ತಿಂಗಳು ಪಿಂಚಣಿ ವಿಳಂಬವಾಗಿರುವುದಕ್ಕೆ ಕಾರಣವೇನು ಎಂಬುದನ್ನು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಸ್ಪಷ್ಟಪಡಿಸಬೇಕು.
ಜಿಲ್ಲಾಡಳಿತ ಹಾಗೂ ಶಾಸಕರು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಿ, ಬಾಕಿ ಇರುವ ಎಲ್ಲಾ ಪಿಂಚಣಿ ಹಣವನ್ನು ತಕ್ಷಣ ಫಲಾನುಭವಿಗಳ ಖಾತೆಗೆ ಜಮೆ ಮಾಡಿಸಬೇಕು. ಮುಂದಿನ ದಿನಗಳಲ್ಲೂ ಇದೇ ರೀತಿಯ ವಿಳಂಬ ಮುಂದುವರಿದರೆ ಬಡವರು ಮತ್ತು ಅಶಕ್ತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಭಾಸ್ಕರ್ ನಾಯಕ್ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!