ಕುಶಾಲನಗರ, ನ 16:ಸುಂಟಿಕೊಪ್ಪ ಹೋಬಳಿಯ ಕೆದೆಕಲ್–ನೇಗದಾಳು ಗ್ರಾಮದ ಪುಲ್ಲೇರ ತಿಮ್ಮಯ್ಯನವರ ತೋಟದಲ್ಲಿ ಕಾಟಿ (ಕಾಡೆಮ್ಮೆ) ಮೃತಪಟ್ಟಿರುವ ವಿಷಯ ತಿಳಿದು ಸುಂಟಿಕೊಪ್ಪ ರೈತ ಸಂಘದ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಕಾಟಿಯನ್ನು ಯಾರೋ ಗುಂಡು ಹಾರಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಅತ್ಯಂತ ಗಂಭೀರವಾಗಿದೆ. ವನ್ಯಜೀವಿಗಳ ರಕ್ಷಣೆ ಹಾಗೂ ಇಂತಹ ಘಟನೆಗಳ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ತಕ್ಷಣವೇ ಸೂಕ್ತ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಹೊರತಂದು ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ವತಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇರೂರು, ವನ್ಯಜೀವಿಗಳ ಹತ್ಯೆ ಯಾವುದೇ ಕಾರಣಕ್ಕೂ ಸಹಿಸಲಾಗದು. ಈ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷರಾದ ಕ್ಲೈವ್ ಪೊನ್ನಪ್ಪ ಮಾತನಾಡಿ, ಪ್ರಸ್ತುತ ಕಾಫಿ ಕೊಯ್ಲಿನ ಸಮಯವಾಗಿದ್ದು, ಪ್ರತಿನಿತ್ಯ ಕಾಟಿಗಳು ತೋಟಗಳಿಗೆ ಬರುತ್ತಿರುವುದರಿಂದ ರೈತರು ಹಾಗೂ ಕಾರ್ಮಿಕರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಕೋಣಗಳು ತೋಟಗಳಿಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅವುಗಳನ್ನು ಕಾಡಿಗೆ ಮರಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುಂಟಿಕೊಪ್ಪ ರೈತ ಸಂಘದ ಅಧ್ಯಕ್ಷರಾದ ಕ್ಲೈವ್ ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇರೂರು ಹಾಗೂ ಪದಾಧಿಕಾರಿಗಳಾದ ದಾಸಂಡ ರಮೇಶ್ ಚೆಂಗಪ್ಪ, ಕುಂಜಲಿನ ಮಂಜುನಾಥ್, ಮಾಗಲು ವಸಂತ, ಉದಯ, ಸಂಜು ಪೊನ್ನಪ್ಪ, ಸೋಮಯ್ಯ, ಜಗದೀಶ್, ಗೋಪಿನಾಥ್, ಪುಲ್ಲೇರ ವಸಂತ, ವೆಂಕಪ್ಪ ಹಾಗೂ ಸತೀಶ್ ಉಪಸ್ಥಿತರಿದ್ದರು.
Back to top button
error: Content is protected !!