ಕುಶಾಲನಗರ, ನ 18:
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕುಂಠಿತವಾಗುತ್ತಿರುವುದು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಅಖಿಲ ಭಾರತ ಸನ್ಯಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ರಾಮನಂದ ಕುಮಾರ ಗುರುಪರ ಸ್ವಾಮಿ ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅಖಿಲ ಭಾರತ ಸನ್ಯಾಸಿ ಸಂಘ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯ ಅಂಗವಾಗಿ ಕಾವೇರಿ- ಬಂಗಾಳಕೊಲ್ಲಿ ಸಮುದ್ರ ಸಂಗಮ ಕಾವೇರಿಪಟ್ಟಣಂ ಬಳಿ ಪೂಂಪುಹಾರ್ ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ಭಾಗಗಳಲ್ಲಿ ಪ್ರಕೃತಿ ಮುನಿಸಿದಂಗೆ ಬಾಸವಾಗುತ್ತಿದೆ. ಇದರಿಂದ ಈ ಭಾಗದ ಕೃಷಿ ಸೇರಿದಂತೆ ಎಲ್ಲಾ ಮಾನವ ಚಟುವಟಿಕೆಗಳು ಸಮಸ್ಯೆಗೆ ಒಳಗಾಗಲು ಪ್ರಾರಂಭವಾಗಿದೆ ಎಂದರು. ನದಿ ಪ್ರಕೃತಿ ಪರಿಸರವನ್ನು ಪ್ರತಿಯೊಬ್ಬರೂ ಆರಾಧಿಸಬೇಕು ಎಂದು ಅವರು ಕರೆ ನೀಡಿದರು. ಕಾವೇರಿಯ ಆರಾಧನೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಖಿಲ ಭಾರತೀಯ ಸನ್ಯಾಸಿಗಳ ಸಂಘದ ಪ್ರಮುಖರಾದ ಶ್ರೀ ವೇದಾನಂದ ಸ್ವಾಮೀಜಿ ಅವರು ಮಾತನಾಡಿ ನದಿ ತೀರಗಳು ಸಂಸ್ಕೃತಿ ಗಳ ಉಗಮ ಸ್ಥಾನವಾಗಿದ್ದು ನಮ್ಮ ದೇಶದಲ್ಲಿ ನದಿಗೆ ತಾಯಿ ದೇವತೆಯ ಸ್ಥಾನ ನೀಡಿ ಪೂಜಿಸಲಾಗುತ್ತಿದೆ ದಕ್ಷಿಣ ಭಾರತದಲ್ಲಿ ಜೀವ ಜಲವಾಗಿರುವ ಕಾವೇರಿ ನದಿ ಸಪ್ತ ನದಿಗಳಲ್ಲಿ ಒಂದಾಗಿದೆ ನದಿ ಇದೀಗ ತನ್ನ ಒಡಲಿನಲ್ಲಿ ಬಹುತೇಕ ಕಲುಷಿತೆಯನ್ನು ಹೊತ್ತು ತನ್ನ ತವರೂರಿನಿಂದಲೇ ಹರಿಯುತ್ತಿರುವ ದೃಶ್ಯ ಎದುರಾಗುತ್ತಿರುವುದು ಬೇಸರದ ಸಂಗತಿ ಆಗಿದೆ. ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಕೊಡಗು ಜಿಲ್ಲೆಯ ತಲಕಾವೇರಿಯಿಂದ ತಮಿಳುನಾಡಿನ ಕಾವೇರಿ ಪಟ್ಟಣಂ ತನಕ ತಮಿಳುನಾಡು ಸೇರಿದಂತೆ ವಿವಿಧ ಪ್ರಾಂತಗಳ ಸಾಧುಸಂತರು ಸ್ವಾಮೀಜಿಗಳು ಕಾರ್ಯಕರ್ತರು ಸ್ವಚ್ಛ ಕಾವೇರಿಗಾಗಿ ಪ್ರತಿ ವರ್ಷ ಒಂದು ತಿಂಗಳ ನದಿ ಜಾಗೃತಿ ರಥಯಾತ್ರೆ ಹಮ್ಮಿಕೊಂಡು ಸ್ವಚ್ಛ ಕಾವೇರಿಯ ಗುರಿಯನ್ನು ಹೊಂದಿ ಸಾಗುತ್ತಿದೆ ಎಂದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಎನ್ ಚಂದ್ರಮೋಹನ್ ಮಾತನಾಡಿ ಸ್ವಚ್ಛಕಾವೇರಿಗಾಗಿ ಕಳೆದ 16 ವರ್ಷಗಳಿಂದ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ ತನಕ ನದಿ ಜಾಗೃತಿ ರಥಯಾತ್ರೆ ಹಮ್ಮಿಕೊಳ್ಳುವ ಮೂಲಕ ಜನರಿಗೆ ನದಿ ಮಹತ್ವ ಮತ್ತು ಸಂರಕ್ಷಣೆಯ ಅರಿವು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಇದೀಗ ತಲಕಾವೇರಿಯಿಂದ ಯಾತ್ರೆಯಲ್ಲಿ ತಂದಿರುವ ಪವಿತ್ರ ಕಾವೇರಿ ತೀರ್ಥವನ್ನು ಕಾವೇರಿ -ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ಸಮರ್ಪಿಸಿ ಸ್ವಚ್ಛ ಕಾವೇರಿಗಾಗಿ ಹಾಗೂ ನಾಡಿನ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದರು.
ತಲಕಾವೇರಿಯಿಂದ ಯಾತ್ರೆಯಲ್ಲಿ ಕಳಸಗಳಲ್ಲಿ ತಂದಿರುವ ಪವಿತ್ರ ಕಾವೇರಿ ಜಲವನ್ನು ವಿಶೇಷ ಹೋಮ ಹವನ ಪೂಜೆ ವಿಧಾನಗಳನ್ನು ಮುಗಿಸಿ ನಂತರ ಸಮುದ್ರ ಸಂಗಮದಲ್ಲಿ ವಿಸರ್ಜನೆ ಮಾಡಿ ಪ್ರಾರ್ಥಿಸಲಾಯಿತು.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನದಿ ಸಂರಕ್ಷಣೆಯ ಸಂಬಂಧ ಅಗತ್ಯ ಯೋಜನೆಗಳನ್ನು ರೂಪಿಸಲು ಎರಡು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹ ಪಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಅಖಿಲ ಭಾರತ ಸನ್ಯಾಸಿಗಳ ಸಂಘದ ಶ್ರೀ ಆತ್ಮಾನಂದ ಸ್ವಾಮೀಜಿ ಅವರು ಪ್ರಾಸ್ತಾವಿಕವಾಗಿ ಯಾತ್ರೆಯ ಬಗ್ಗೆ ವಿಷಯ ಮಂಡಿಸಿದರು.
ಒಂದು ತಿಂಗಳ ಕಾಲದ ಯಾತ್ರೆ ಅವಧಿಯಲ್ಲಿ ಸಹಕರಿಸಿದ ಸರ್ವರನ್ನು ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ಶಿವರಾಮನಂದ ಸ್ವಾಮೀಜಿ ಮತ್ತು ಕಾರ್ಯಕ್ರಮ ಸಂಯೋಜಕರಾದ ಶ್ರೀ ಬಾಲ ರಘುನಾಥನಂದ ಸ್ವಾಮೀಜಿ ಅವರು ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು.
ಅಖಿಲ ಭಾರತೀಯ ಸನ್ಯಾಸಿಗಳ ಸಂಗಮ 2028 ರಲ್ಲಿ ಆಯೋಜಿಸುತ್ತಿರುವ ಕುಂಭಕೋಣಂ ಮಹಾ ಕುಂಭಮೇಳದ ಕರ ಪತ್ರವನ್ನು ಅಖಿಲ ಭಾರತೀಯ ಸನ್ಯಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ರಾಮನಂದ ಕುಮಾರ ಗುರುಪರ ಸ್ವಾಮಿಗಳು ಮತ್ತಿತರ ಸಾಧು ಸಂತರು ಬಿಡುಗಡೆಗೊಳಿಸಿದರು.
ಮೌನ ವ್ರತದಲ್ಲಿದ್ದ ಅಖಿಲ ಭಾರತ ಸನ್ಯಾಸಿಗಳ ಸಂಗಮದ ಸ್ಥಾಪಕರಾದ ಶ್ರೀ ರಾಮನಂದ ಸ್ವಾಮೀಜಿ ಅವರು ಆಶೀರ್ವಾದ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಕುಶಾಲನಗರದಿಂದ ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರಾದ ಕೆ ಜಿ ಮನು, ಕಾವೇರಿ ಆರತಿ ಬಳಗದ ಮಂಜುನಾಥ್, ಶಿವಾಜಿ ರಾವ್, ಆತ್ಮಾನಂದ, ರಾಜು, ಸುಮನ್, ನವೀನ್ ಕುಮಾರ್ ಸೇರಿದಂತೆ 12 ಮಂದಿ ಪಾಲ್ಗೊಂಡಿದ್ದರು.