ಮಹಾಸಭೆ ಅಧ್ಯಕ್ಷತೆ ಬದಲಾವಣೆ ವಿಚಾರವಾಗಿ ಗದ್ದಲ, ಗೊಂದಲ

ಕುಶಾಲನಗರ, ಸೆ 24:ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 50ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಂಘದ ಉಪಾಧ್ಯಕ್ಷ ಬಿ.ಎನ್.ಕಾಶಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಮಹಾಸಭೆ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಸಭೆಯ ಅಧ್ಯಕ್ಷತೆ ಕುರಿತಾಗಿ ಆಕ್ಷೇಪಗಳು ವ್ಯಕ್ತಗೊಂಡವು.
ಮಹಾಸಭೆ ಆಹ್ವಾನ ಪತ್ರಿಕೆಯಲ್ಲಿ ಸಂಘದ ಅಧ್ಯಕ್ಷ ಬಿ.ಸಿ.ಮಾದಯ್ಯ ಅವರ ಅಧ್ಯಕ್ಷತೆ ಎಂದು ಮುದ್ರಣಗೊಂಡಿದ್ದರೂ ಕೂಡ ಇಂದಿನ ಮಹಾಸಭೆಯ ಅಧ್ಯಕ್ಷತೆಯನ್ನು ಬದಲಾಯಿಸಿರುವ ಕುರಿತ ವಿಚಾರವಾಗಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತಗೊಂಡಿತು.
ಸಭೆಯಲ್ಲಿ ಅಧ್ಯಕ್ಷ ಬಿ.ಸಿ.ಮಾದಯ್ಯ ಅವರು ಪಾಲ್ಗೊಂಡಿದ್ದಾರೆ. ಯಾವ ಕಾರಣದಿಂದ ಅಧ್ಯಕ್ಷತೆ ಬದಲಾಯಿತು ಎಂದು ಸಮಜಾಯಿಷಿಕೆ ನೀಡುವಂತೆ ಸದಸ್ಯರಾದ ಸಿ.ಎಲ್.ವಿಶ್ವ, ನಂಗಾರು ಜಗ, ಮಹೇಶ್, ಲೋಕನಾಥ್, ಸುಮೇಶ್ ಮತ್ತಿತರರು ಒತ್ತಾಯಿಸಿದರು.
ಆಡಳಿತ ಮಂಡಳಿ ನಿರ್ದೇಶಕರಾದ ಆರ್.ಕೆ.ಚಂದ್ರ ಮತ್ತು ಬಿ.ಎಸ್.ಧನಪಾಲ್ ಅವರು ಕೂಡ ವೇದಿಕೆ ಏರದೆ ಸದಸ್ಯರ ನಡುವೆ ಕುಳಿತು ಅಸಮಾಧಾನ ವ್ಯಕ್ತಪಡಿಸಿದರು. ಹಲವು
ದಿನಪತ್ರಿಕೆಗಳಲ್ಲಿ ಕೂಡ ಸಭೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷರು ವಹಿಸುವ ಕುರಿತು ಜಾಹಿರಾತು ಪ್ರಕಟಗೊಳಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಗೊಂಡಿತು. ಈ ಕುರಿತು ಸ್ಪಷ್ಟನೆ ನೀಡುವಂತೆ ಸಿಇಒ ಅವರನ್ನು ಒತ್ತಾಯಿಸಲಾಯಿತು.
ಸುಮಾರು 1 ಗಂಟೆಗಳ ಕಾಲ ಇದೇ ವಿಚಾರವಾಗಿ ಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು.
ಸದಸ್ಯರ ಹಿತಾಸಕ್ತಿ ಬದಿಗೊತ್ತಿ ಆಡಳಿತ ಮಂಡಳಿಯವರೇ ಏಕಪಕ್ಷೀಯವಾಗಿ ತೀರ್ಮಾನಗಳನ್ನು ಕೈಗೊಳ್ಳುವುದಾದರೆ ಆಡಳಿತ ಮಂಡಳಿಯನ್ನು ಬರಾಕಸ್ತುಗೊಳಿಸಿ ಮರುಚುನಾವಣೆ ನಡೆಸುವಂತೆ ಕೂಡ ಸಲಹೆಗಳು ವ್ಯಕ್ತಗೊಂಡವು.
ಯಾವುದೇ ಕಾರಣಕ್ಕೂ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಯಕೂಡದು. ಇಂದಿನ ಸಭೆಯನ್ನು ಮೊಟಕುಗೊಳಿಸಿ, ಮುಂದೂಡಿ ಎಂದು ಕೆಲಸ ಸದಸ್ಯರು ಒತ್ತಾಯಿಸಿದರು.
ನಂತರ ಸದಸ್ಯರ ಒತ್ತಾಯ ಹಾಗೂ ಗದ್ದಲದ ಕಾರಣ ಸಂಘದ ಉಪಾಧ್ಯಕ್ಷ ಬಿ.ಎನ್.ಕಾಶಿ ಅವರು ಅಧ್ಯಕ್ಷ ಬಿ.ಸಿ.ಮಾದಯ್ಯ, ನಿರ್ದೇಶಕರಾದ ಆರ್.ಕೆ.ಚಂದ್ರ, ಬಿ.ಎಸ್.ಧನಪಾಲ್ ಅವರ ಮನವೊಲಿಸಿ ವೇದಿಕೆಗೆ ಕರೆತಂದರು.
ಈ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿ.ಎನ್.ಕಾಶಿ ಅವರ ಅನುಮತಿ ಮೇರೆಗೆ ಮಾತನಾಡಿದ ನಿರ್ದೇಶಕ ಮಹೇಶ್ ಚಂದ್ರ, ಅಧ್ಯಕ್ಷತೆ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದರು. ಸಂಘದ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡಿಸಲಾಗಿದೆ. ಅವಿಶ್ವಾಸದಲ್ಲಿ ಅಧ್ಯಕ್ಷರಿಗೆ ಸೋಲಾಗಿದೆ. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಉಪಾಧ್ಯಕ್ಷರಿಗೆ ಸಭೆಯ ಅಧ್ಯಕ್ಷತೆ ನೀಡಲಾಗಿದೆ ಎಂದು ತಿಳಿಸಿದರು. ಅವಿಶ್ವಾಸಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘದ ಸಭೆಗಳನ್ನು ಕರೆಯುವ ಅಧ್ಯಕ್ಷರು ಸಕಾಲದಲ್ಲಿ ಆಗಮಿಸುವುದಿಲ್ಲ, ಸಭೆಗಳಿಗೆ ನಿರಂತರ ಗೈರಾಗುತ್ತಾರೆ, ಸಾಲದ ಅರ್ಜಿಗಳಿಗೆ ಸರಿಯಾಗಿ ಸಹಿ ಮಾಡದ ಕಾರಣ ಸುಗಮ ಆಡಳಿತ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಇದನ್ನು ಮನವರಿಕೆ ಮಾಡಿ ರಾಜೀನಾಮೆಗೆ ಕೋರಲಾಗಿತ್ತು. ಅವರು ಕೂಡ ರಾಜೀನಾಮೆ ನೀಡುವುದಾಗಿ ನೀಡಿದ ಭರವಸೆಯಂತೆ ನಡೆದುಕೊಳ್ಳದ ಕಾರಣ ಅವಿಶ್ವಾಸ ತರಲಾಗಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿದ್ದ ಅಧ್ಯಕ್ಷ ಬಿ.ಸಿ
ಮಾದಯ್ಯ ಮಾತನಾಡಿ, ಆರೋಪಗಳನ್ನು ತಳ್ಳಿ ಹಾಕಿದರು. ಒಂದೆರೆಡು ತುರ್ತು ಸಭೆಗಳಿಗೆ ಗೈರಾದದ್ದು ಬಿಟ್ಟರೆ ಎಲ್ಲಾ ಮಾಸಿಕ ಸಭೆಗಳಿಗೆ ಹಾಜರಾಗಿದ್ದೇನೆ. ಕಳೆದ 7 ವರ್ಷಗಳ ನನ್ನ ಅಧ್ಯಕ್ಷ ಅವಧಿಯಲ್ಲಿ ಸಾಲ ವಿತರಣೆಯಲ್ಲಿ ಯಾವುದೇ ಸದಸ್ಯರಿಗೂ ಕೂಡ ತಾರತಮ್ಯ ಮಾಡಿಲ್ಲ, ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳಲ್ಲಿ ರಾಜೀನಾಮೆ ನೀಡುವುದಾಗಿ ಕೂಡ ತಿಳಿಸಿದ್ದೇನೆ. ಆದರೆ ಅದನ್ನು ಮೂರು ದಿನ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಮ್ಮ ಮೇಲಿನ ಆರೋಪ ತಳ್ಳಿಹಾಕಿ ವೇದಿಕೆಯಿಂದ ಹೊರನಡೆದರು.
ನಂತರ ಸಂಘದ ಉಪಾಧ್ಯಕ್ಷ ಬಿ.ಎನ್.ಕಾಶಿ ಅವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರೆಯಿತು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಸ್.ಬಿ.ಅನಿತಾ, ಕೆ.ಡಿ.ದಾದಪ್ಪ, ವಿ.ಎಸ್.ರಾಜಪ್ಪ, ಟಿ.ಕೆ.ಉದಯಕುಮಾರ್, ಎಸ್.ಎಸ್.ಕಾರ್ಯಪ್ಪ, ಕೆ.ಕೆ.ಲೀಲಾವತಿ, ಎನ್.ಸಿ.ಪಂಚಾಕ್ಷರಿ ಇದ್ದರು.



