ಕುಶಾಲನಗರ, ಜು 22: ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಆರ್ ಗುಂಡೂರಾಯರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ದಿವಂಗತ ಆರ್ ಗುಂಡೂರಾಯರ ಪುತ್ತಳಿ ನಿರ್ಮಾಣದ ಸಂಬಂಧ ನಡೆದ ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
1960ರ ದಶಕದಲ್ಲಿ ಕುಶಾಲನಗರ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿರುವ ರಾಯರು ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ತಿಳಿಸಿದ ಅವರು ಅವರ ಸ್ಮರಣೆಗಾಗಿ ಪುರಸಭೆಯ ಆವರಣದಲ್ಲಿ ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವುದು ಉತ್ತಮ ವಿಚಾರ ಎಂದು ಹೇಳಿದರು.
ಈ ಸಂಬಂಧ ಪ್ರತಿಯೊಬ್ಬರ ಸಲಹೆ ಸೂಚನೆಗಳನ್ನು ಆಲಿಸಿದರು.
ಆಗಸ್ಟ್ ತಿಂಗಳಲ್ಲಿ ರಾಯರ ಪುಣ್ಯ ಸ್ಮರಣೆ ದಿನದಂದು ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಇಂಜಿನಿಯರ್ ಅರ್ಬಸ್ ಅಹಮದ್ ಅವರು ಪ್ರತಿಮೆ ನಿರ್ಮಾಣದ ಬಗ್ಗೆ ಸಭೆಗೆ ತಾಂತ್ರಿಕ ಮಾಹಿತಿ ಒದಗಿಸಿದರು.
ಈ ಸಂಬಂಧ ರಾಯರ ಒಡನಾಡಿಗಳು ಹಾಗೂ ಸರ್ವ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಅಂತಿಮವಾಗಿ ಚರ್ಚಿಸಿ ನಿರ್ಮಾಣ ಸಮಿತಿ ಒಂದನ್ನು ರೂಪಿಸಲು ಈ ತಿಂಗಳ 28 ರಂದು ಸಭೆ ನಡೆಸುವಂತೆ ನಿರ್ಧರಿಸಲಾಯಿತು.
ರಾಯರ ಆಪ್ತ ಸಹಾಯಕರು ಮತ್ತು ಒಡನಾಡಿ ಆಗಿದ್ದ ಎಂ ಎಚ್ ಫಜಲುಲ್ಲಾ, ಹಿರಿಯರಾದ ಎಂ ವಿ ನಾರಾಯಣ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪುತ್ಥಳಿ ನಿರ್ಮಾಣದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ರಾಯರ ಕುಟುಂಬ ಸದಸ್ಯರು ಮತ್ತು ಕಾಂಗ್ರೆಸ್ ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್, ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಕ್ಷಗಳ ಪದಾಧಿಕಾರಿಗಳು ಇದ್ದರು.
Back to top button
error: Content is protected !!