ಕುಶಾಲನಗರ ಜು 13: ಕುಶಾಲನಗರ ಇನ್ನರ್ ವೀಲ್ ಕ್ಲಬ್ ಮುಖಾಂತರ ಮಹಿಳೆಯರು ಸೇವೆ ಮಾಡಲು ಮುಂದಾಗಬೇಕು ಎಂದು ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಅಶ್ವಿನಿ ರೈ ಕರೆ ನೀಡಿದರು.
ಕುಶಾಲನಗರದ ಇನ್ನರ್ ವೀಲ್ ಕ್ಲಬ್ ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಬೇಕು. ದುಡಿದ ಒಂದಿಷ್ಟು ಹಣವನ್ನು ಬಡವರಿಗೆ ಅವಶ್ಯವಿರುವುದನ್ನು ನೀಡುವ ಮೂಲಕ ಮತ್ತೊಂದು ಕುಟುಂಬದ ಸಂತೋಷಕ್ಕೆ ಕಾರಣರಾಗಬೇಕು. ಆ ಮೂಲಕ ನಮ್ಮಲ್ಲಿ ಸಾರ್ಥಕತೆಯನ್ನು ಕಾಣಬೇಕು. ಮತ್ತೊಬ್ಬರ ಒಳಿತಿನಲ್ಲಿ ನಮ್ಮ ಸುಖ ಕಾಣುವ ಮನಸ್ಸು ಬರಬೇಕೆಂದರೆ ಸಾಮಾಜಿಕ ಕೆಲಸ ಮಾಡುವ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
2026 – 2027 ರ ಅವಧಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೀತಾಲಕ್ಷ್ಮೀ ಮಾತನಾಡಿ, ನಾನು ಇನ್ನರ್ ವೀಲ್ ಕ್ಲಬ್ ಗೆ ಸೇರಿದ ಮೇಲೆ ವಿಶಾಲವಾದ, ವಿಶಿಷ್ಠವಾದ ಪ್ರಪಂಚ ನೋಡುವ ಸೌಭಾಗ್ಯ ದೊರೆತಿತ್ತು. ಈಗ ಅಧ್ಯಕ್ಷೆಯಾಗಿ ಸಾಕಷ್ಟು ಸಮಾಜಮುಖಿ ಯೋಜನೆಗಳನ್ನು ಮಾಡುವ ಗುರಿ ಹೊಂದಿದ್ದೇನೆ. ಎಲ್ಲರ ಸಹಕಾರ ಪಡೆದು ಗುರಿ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಿ ಚೆನ್ನಮ್ಮ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯದ ಜೊತೆಗೆ ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಉತ್ತಮ ಫಲಿತಾಂಶ ಪಡೆದ ಸಂಸ್ಥೆಯ ಮಕ್ಕಳಿಗೆ, ಅವರ ಸಾಧನೆಗೆ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಕನ್ನಡದ ನವ ಕವಯತ್ರಿ ವಿಜಯಶ್ರೀ ಕೆದಿಲಾಯರನ್ನು ಸನ್ಮಾನಿಸಿ ಉತ್ತೇಜಿಸಲಾಯಿತು.
ರೋಟರಿ ಅಧ್ಯಕ್ಷ ರುದ್ರೇಶ್ ಪಟೇಲ್ ಅವರು ಇನ್ನರ್ ವೀಲ್ ಸುದ್ದಿ ಪತ್ರಿಕೆ ಲೋಪಮುದ್ರ ವನ್ನು ಲೋಕಾರ್ಪಣೆಗೊಳಿಸಿದರು.
ನೂತನ ಸಾಲಿನ ಕಾರ್ಯದರ್ಶಿಯಾಗಿ ಶಾಲಿನಿ ನರೇಂದ್ರರವರು ಅಧಿಕಾರ ಸ್ವೀಕರಿಸಿದರು.
ಖಜಾಂಚಿ ಕುಸುಮ ನಟೇಶ್, ಸಂಸ್ಥೆಯ ಸಂಪಾದಕಿ ಜಾಸ್ಮಿನ್ ಪ್ರಕಾಶ್, ಐಎಸ್ಓ ಚಿತ್ರಾ ರಮೇಶ್, ಪೂರ್ವ ಅಧ್ಯಕ್ಷರು, ಸಮಿತಿ ಸದಸ್ಯರು ಸೇರಿದಂತೆ ಮತ್ತಿತ್ತರು ಹಾಜರಿದ್ದರು.
Back to top button
error: Content is protected !!