ಪ್ರಶಸ್ತಿ

ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ರಿವ್ಯೂವರ್’ ಗೌರವಕ್ಕೆ ಡಾ. ಜೆ.ಜಿ. ಮಂಜುನಾಥ್

ಮಡಿಕೇರಿ, ಸೆ 24: ಸಂಶೋಧನಾ ಕ್ಷೇತ್ರದಲ್ಲಿ ಕೊಡಗಿನ ಹೆಮ್ಮೆಗೆ ಮತ್ತೊಂದು ಗರಿ ಮೂಡಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜೆ.ಜಿ. ಮಂಜುನಾಥ ಅವರು ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ECS ರಿವ್ಯೂವರ್–2025-26’ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ವೈಜ್ಞಾನಿಕ ಸಂಶೋಧನಾ ಲೇಖನಗಳ ಪರಿಶೀಲನೆ, ಅವುಗಳ ಗುಣಮಟ್ಟ ಹಾಗೂ ಸಂಶೋಧನಾ ಪ್ರಕಟಣೆಗಳ ವಿಶ್ವಾಸಾರ್ಹತೆಯನ್ನು ಕಾಪಾಡುವಲ್ಲಿ ಡಾ. ಮಂಜುನಾಥ ಅವರು ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

2026ರ ECS ಪೀರ್ ರಿವ್ಯೂ ವೀಕ್ ಅಂಗವಾಗಿ ಸೆಪ್ಟೆಂಬರ್ 14ರಂದು ಸೊಸೈಟಿ ವತಿಯಿಂದ ಡಾ. ಮಂಜುನಾಥ ಅವರಿಗೆ ಅಭಿನಂದನಾ ಪತ್ರವನ್ನು ಕಳುಹಿಸಲಾಗಿದ್ದು, ಅವರ ಪರಿಶ್ರಮ, ಸಮಯೋಚಿತ ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಲಾಗಿದೆ.

ಈ ಬಾರಿ 2025-26ನೇ ಸಾಲಿನ ಟಾಪ್ ECS ರಿವ್ಯೂವರ್‌ಗಳಾಗಿ ಒಟ್ಟು 38 ಸಂಶೋಧಕರನ್ನು ಗುರುತಿಸಲಾಗಿದೆ. ಈ ಪೈಕಿ ಆರ್ಗ್ಯಾನಿಕ್ ಮತ್ತು ಬಯೋಎಲೆಕ್ಟ್ರೋಕೆಮಿಸ್ಟ್ರಿ ವಿಭಾಗದಿಂದ ಗೌರವಕ್ಕೆ ಆಯ್ಕೆಯಾದ ಮೂವರು ರಿವ್ಯೂವರ್‌ಗಳಲ್ಲಿ ಡಾ. ಜೆ.ಜಿ. ಮಂಜುನಾಥ ಕೂಡ ಒಬ್ಬರಾಗಿದ್ದಾರೆ.

ಗೌರವದ ಅಂಗವಾಗಿ ಡಾ. ಮಂಜುನಾಥ ಅವರಿಗೆ ಒಂದು ವರ್ಷದ ECS ಸದಸ್ಯತ್ವ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜೊತೆಗೆ, 2027ರ ಮೇ 30ರಿಂದ ಜೂನ್ 3ರವರೆಗೆ ಅಮೆರಿಕದ ವಾಷಿಂಗ್ಟನ್ ಡಿ.ಸಿಯಲ್ಲಿ ನಡೆಯಲಿರುವ 251ನೇ ECS ಸಭೆಗೆ ಉಚಿತ ಪ್ರವೇಶದ ಅವಕಾಶವನ್ನೂ ನೀಡಲಾಗಿದೆ.

ಅಲ್ಲದೆ, 2026ರ ಚಳಿಗಾಲದ ‘ದಿ ಎಲೆಕ್ಟ್ರೋಕೆಮಿಕಲ್ ಸೊಸೈಟಿ ಇಂಟರ್ಫೇಸ್’ ಮ್ಯಾಗಜೀನ್‌ನಲ್ಲಿ ಡಾ. ಮಂಜುನಾಥ ಅವರ ಈ ಸಾಧನೆಯನ್ನು ವಿಶೇಷವಾಗಿ ಗುರುತಿಸಲಾಗುತ್ತಿದೆ.

ವೈಜ್ಞಾನಿಕ ಸಂಶೋಧನೆ ಮತ್ತು ಸಂಶೋಧನಾ ಲೇಖನಗಳ ಗುಣಮಟ್ಟ ಹೆಚ್ಚಿಸುವಲ್ಲಿ ಸಲ್ಲಿಸಿರುವ ಸೇವೆಗೆ ದೊರೆತಿರುವ ಈ ಅಂತರರಾಷ್ಟ್ರೀಯ ಮನ್ನಣೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಕೊಡಗಿನ ಶೈಕ್ಷಣಿಕ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!