ಕಾರ್ಯಕ್ರಮ

ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ವಿವಿಧ ಸಮುದಾಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

ಕುಶಾಲನಗರ, ಜುಲೈ 12: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ರಾಷ್ಟ್ರೀಯ ಉಪಾಧ್ಯಕ್ಷ (NVP) JFS ಜಿತೇಶ್ ಅಡ್ವಾಣಿ ಅವರ ಸಮ್ಮುಖದಲ್ಲಿ ಹಾಗೂ ವಲಯ ಅಧ್ಯಕ್ಷ (ZP) JC ಪ್ರಜ್ವಲ್ ಎಸ್. ಜೈನ್ ಅವರ ಉಪಸ್ಥಿತಿಯಲ್ಲಿ ವಿವಿಧ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಅರ್ಥಪೂರ್ಣವಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಹಾರಂಗಿ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ಸಿಸಿಟಿವಿ ಭದ್ರತಾ ವ್ಯವಸ್ಥೆ, ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಪ್ಯೂರಿಫೈಯರ್ ಹಾಗೂ ವಿದ್ಯಾರ್ಥಿಗಳಿಗಾಗಿ ಕುರ್ಚಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗೊಂದಿಬಸವನಹಳ್ಳಿ ಸರ್ಕಾರಿ ಶಾಲೆಗೆ ವಾಟರ್ ಪ್ಯೂರಿಫೈಯರ್ ವಿತರಿಸಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಅಲ್ಲದೆ ಕೂಡಿಗೆ ದೇವಸ್ಥಾನದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಾಟರ್ ಪ್ಯೂರಿಫೈಯರ್ ಅನ್ನು ಲೋಕಾರ್ಪಣೆ ಮಾಡಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಉಪಾಧ್ಯಕ್ಷ JFS ಜಿತೇಶ್ ಅಡ್ವಾಣಿ, “ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಲಭ್ಯಗಳ ವಿಸ್ತರಣೆ ಅತ್ಯಂತ ಅವಶ್ಯಕ. ಜೆಸಿಐ ಕುಶಾಲನಗರ ಕಾವೇರಿ ಕೈಗೊಳ್ಳುತ್ತಿರುವ ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದ್ದು, ಸಮಾಜದ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿವೆ” ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಹಾರಂಗಿ ಗ್ರಾಮದ ಜನಪ್ರತಿನಿಧಿ ಭಾಸ್ಕರ್ ನಾಯಕ್ ಮಾತನಾಡಿ, “ಜೆಸಿಐ ಕುಶಾಲನಗರ ಕಾವೇರಿಯಂತಹ ಸೇವಾ ಮನೋಭಾವದ ಸಂಘ-ಸಂಸ್ಥೆಗಳ ಸಹಕಾರದಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ದೊರೆಯುತ್ತಿವೆ. ಈ ಯೋಜನೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಮಹತ್ತರ ಪಾತ್ರವಹಿಸಲಿವೆ. ವಿಶೇಷವಾಗಿ ಈ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವೈಯಕ್ತಿಕ ಆಸಕ್ತಿ ವಹಿಸಿ, ನಿರಂತರ ಮುತುವರ್ಜಿ ವಹಿಸಿ ಕಾರ್ಯಗತಗೊಳಿಸಿದ ಜೆಸಿಐ ಇಂಡಿಯಾ ವಲಯ-14ರ ಝೋನ್ ಅಧಿಕಾರಿಗಳಾದ JC ರಜನಿಕಾಂತ್ ಎಂ.ಜೆ. ಜೆಸಿ ಜಗದೀಶ್ ಬಿ,ಹಾಗು ಜೆಸಿ ತೇಜಾ ದಿನೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷ JC ಶ್ರೀನಿವಾಸ್, ಜೆಸಿಐ ಇಂಡಿಯಾ ವಲಯ-14ರ ಝೋನ್ ಅಧಿಕಾರಿ JC ರಜನಿಕಾಂತ್ ಎಂ.ಜೆ., JC ತೇಜಾ ದಿನೇಶ್, ಪೂರ್ವ ವಲಯ ಉಪಾಧ್ಯಕ್ಷ ಜಗದೀಶ್ ಬಿ., ಕಾರ್ಯದರ್ಶಿ JC ನಿಶಾಂತ್ ಶೌರ್ಯ, ಜೆಸಿಐ ಸದಸ್ಯರು, ಶನಿವಾರಸಂತೆ ಅಧ್ಯಕ್ಷ ರವಿ ಸಿ ಹಾಗು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು, ಭಕ್ತಾದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊನೆಯಲ್ಲಿ ಮಾತನಾಡಿದ ಅಧ್ಯಕ್ಷ JC ಶ್ರೀನಿವಾಸ್, “ಜೆಸಿಐ ಕುಶಾಲನಗರ ಕಾವೇರಿ ಮುಂದಿನ ದಿನಗಳಲ್ಲಿಯೂ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ಇನ್ನಷ್ಟು ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಸೇವೆಯನ್ನು ನಿರಂತರವಾಗಿ ಮುಂದುವರಿಸಲಿದೆ” ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!