ಕುಶಾಲನಗರ ಜೂ 24:: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ನಿರ್ಮಿಸಲಾದ ಕಾವೇರಿ ರೋಟರಿ ಉದ್ಯಾನವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರೋಟರಿ ಸುವರ್ಣ ಸಂಭ್ರಮದ ಅಂಗವಾಗಿ ಹಲವು ವೈವಿಧ್ಯಮಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಪೈಕಿ ಹಳೆಯ ಸೇತುವೆಯನ್ನು ಉದ್ಯಾನವನವನ್ನಾಗಿ ಪರಿವರ್ತಿಸುವ ಮೂಲಕ ಎಲ್ಲರ ಮನ ಆಹ್ಲಾದಗೊಳಿಸುವ ರೀತಿಯಲ್ಲಿ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುವಂತೆ ಮಾಡಿರುವುದು ಪ್ರಶಂಸನೀಯ ಎಂದರು. ಸಾರ್ವಜನಿಕರು ಇದನ್ನು ಒಳ್ಳೆಯ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ಮೂಲೆಗುಂಪಾಗಿದ್ದ ಪುರಾತನ ಸೇತುವೆಯನ್ನು ಉದ್ಯಾನವನವಾಗಿ ಪರಿವರ್ತಿಸಿದ ಪರಿಯನ್ನು ವಿವರಿಸಿದರು. ಶಾಸಕರು, ದಾನಿಗಳ ಸಹಕಾರದಿಂದ ಒಂದು ಅತ್ಯುನ್ನತ ಯೋಜನೆ ರೂಪಿಸಿರುವುದು ಸಾರ್ಥಕತೆ ತಂದಿದೆ ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರಬಾಬು ಮಾತನಾಡಿದರು.
ಈ ಸಂದರ್ಭ ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಎಸ್ಎಲ್ಎನ್ ಸಂಸ್ಥೆಯ ಸಾತಪ್ಪನ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ರೋಟರಿ ಸಂಸ್ಥೆಯ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಹೆಚ್.ಪಿ. ಮಂಜುನಾಥ್ ಸೇರಿದಂತೆ ರೋಟರಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
Back to top button
error: Content is protected !!