ಕುಶಾಲನಗರ, ಜೂ 16: ಕುಶಾಲನಗರದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಿಂಟಾಗುವ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಯ ಅವಶ್ಯವಿದೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ಪ್ರಮುಖರಾದ ವಕೀಲ ಭರತ್ ಮಾಚಯ್ಯ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಪುತ್ರ ಕಾಣೆಯಾಗಿರುವ ಬಗ್ಗೆ ಪತಿ ರಾಜೀವ ಎಂಬವರು ದೂರು ದಾಖಲಿಸಿದ್ದಾರೆ. ಪ್ರಕರಣ ಬೆನ್ನು ಹತ್ತಿದ ಪೊಲೀಸರು ಆ ಇಬ್ಬರನ್ನು ಕೇರಳ ರಾಜ್ಯದ ಮಂಜೇರಿ ಪ್ರದೇಶದಿಂದ ಪತ್ತೆಹಚ್ಚಿ ಕರೆತಂದಿದ್ದಾರೆ. ಈ ಸಂದರ್ಭ ಅಪ್ರಾಪ್ತನನ್ನು ಬಲವಂತವಾಗಿ ಮತಾಂತರ ಮಾಡಿರುವ ಅಂಶ ಗಮನಕ್ಕೆ ಬಂದಿದೆ. ಇದರ ಹಿಂದೆ ಅನ್ಯ ಕೋಮಿನ ವ್ಯಕ್ತಿಗಳ ಕೈವಾಡವಿದ್ದು ದೊಡ್ಡ ಮಟ್ಟದ ಜಾಲ ಇರುವ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಪ್ರಕರಕ್ಕೆ ಸಂಬಂಧಿಸಿದ ಆರೋಪಿ ಮಡಿಕೇರಿ ರೌಡಿಶೀಟರ್ ನನ್ನು ಗಡಿಪಾರು ಮಾಡಬೇಕು.
ಎನ್.ಟಿ.ಸಿ ಕೇಂದ್ರದಲ್ಲಿನ ಅನ್ಯ ಕೋಮಿನ ವರ್ತಕರಿಂದ ಹಿಂದೂ ಯುವತಿಯರ ಮೇಲೆ ನಡೆಯುತ್ತಿದೆ ಎನ್ನಲಾದ ದೌರ್ಜನ್ಯದ ಬಗ್ಗೆ ಪರಿಶೀಲನೆ ಅಗತ್ಯವಿದೆ ಎಂದು ಆಗ್ರಹಿಸಿದರು.
ಸಮಿತಿಯ ಮತ್ತೋರ್ವ ಮುಖಂಡ ಅಮೃತ ರಾಜ್ ಮಾತನಾಡಿ, ಈ ಘಟನೆಗಳ ಹಿಂದೆ ಪೊಲೀಸರಲ್ಲಿ ದೂರು ದಾಖಲಿಸಿದಂತೆ ಲವ್ ಜಿಹಾದ್ ಮತ್ತು ಹಣ ಲಪಟಾಯಿಸಿರುವ ಮಾಹಿತಿ ಇದೆ. ಇದಕ್ಕೆ ಸಂಬಂಧಪಟ್ಟ ದೂರಿನ ಅನ್ವಯ ನಿಸರ್ಗಧಾಮ ಮುಂಭಾಗದ ಹೋಟೆಲ್ ಉದ್ಯಮಿ ಸೇರಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿ ಮಡಿಕೇರಿ ಜೈಲಿಗೆ ಕಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವ್ಯಕ್ತಿಗಳು ಕುಶಾಲನಗರದ ಕಾವೇರಿ ನಿಸರ್ಗಧಾಮ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದು, ಆ ಅಂಗಡಿಗಳ ಕಾನೂನು ಬದ್ಧತೆ, ಪರವಾನಿಗೆ ಮತ್ತು ಸ್ಥಳೀಯ ನಿಯಮಗಳ ಅನುಸರಣೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ ಎಂದರು.
ಈ ಅಂಗಡಿಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟ, ಅಗತ್ಯ ಪರವಾನಿಗೆ ಮತ್ತು ತೂಕ ಅಳತೆಯ ನಿಯಮಗಳ ಪಾಲನೆ, ಕುರಿತು ಆಹಾರ ಸುರಕ್ಷಿತ ಪ್ರಾಧಿಕಾರ ಪರಿಶೀಲಿಸಬೇಕಾಗಿದೆ ಎಂದರು.
ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮಾತನಾಡಿ, ಈ ಪ್ರಕರಣದಲ್ಲಿ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಮಹಿಳೆಯನ್ನು ಮೋಸದ ಜಾಲದಲ್ಲಿ ಸಿಲುಕಿಸಿ ಮತಾಂತರಗೊಳಿಸುವ ಪ್ರಕ್ರಿಯೆ ನಡೆದಿದೆ. ಈ ಮೂಲಕ ಅನೇಕ ಆರ್ಥಿಕ ಮುಗ್ಗಟ್ಟಿರುವ ಮುಗ್ಧರು, ಇಂಥವರ ಮೋಸ ಜಾಲದಲ್ಲಿ ಸಿಲುಕಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗ ಹೊರ ಬಂದಿರುವ ಈ ಪ್ರಕರಣ ಒಂದು ಸ್ಯಾಂಪಲ್ ಮಾತ್ರ. ಇಂತ ಘಟನೆಗಳು ಬಹಳಷ್ಟು ನಡೆದಿವೆ ಎಂಬುದು ಕಂಡು ಬರುತ್ತಿದೆ. ತಕ್ಷಣ ಈ ಪ್ರಕರಣದ ಹಿಂದಿರುವ ಸಮಾಜಘಾತಕ ಶಕ್ತಿಗಳನ್ನು ಪತ್ತೆಹಚ್ಚಿ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಅನಿವಾರ್ಯವೇನಿಸಿದರೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದರು.
ಕುಶಾಲನಗರ ಕೇರಳ ಸಮಾಜದ ಮುಖಂಡರಾದ ಕೆ. ವರದ ಮಾತನಾಡಿ, ಕುಶಾಲನಗರದ ಕೆಲವು ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಕೊರತೆಯಾಗುವ ರೀತಿಯಲ್ಲಿ ಅನೇಕ ಪ್ರಕರಣಗಳು ನಡೆಯುತ್ತಿವೆ, ಆರ್ಥಿಕ ದುರ್ಬಲತೆ ಎಂಬ ನ್ಯೂನತೆಗಳನ್ನು ಬಳಸಿಕೊಂಡು ಸಮಾಜ ವಿರೋಧಿ ಶಕ್ತಿಗಳು ಮತಾಂತರದ ಪ್ರಯತ್ನಕ್ಕೆ ಮುಂದಾಗಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಜಾಗೃತೆ ವಹಿಸಿ ಈ ಜಾಲದಲ್ಲಿರುವ ಎಲ್ಲರನ್ನೂ ಕಾನೂನಿಗೆ ಒಳಪಡಿಸಬೇಕೆಂಬ ಒತ್ತಾಯ ಹಿಂದೂ ಹಿತರಕ್ಷಣ ಸಮಿತಿ ಮೂಲಕ ಮನವಿ ಮಾಡುತ್ತೇವೆ, ಈಗ ಹೊರ ಬಂದಿರುವ ಮೋಸದ ಜಾಲಕ್ಕೆ ಸಿಲುಕಿರುವ ಮಹಿಳೆ ಮತ್ತು ಅಪ್ರಾಪ್ತ ಬಾಲಕನ ಪ್ರಕರಣಕ್ಕೆ ಪೊಲೀಸರು ಕುಟುಂಬಕ್ಕೆ ಸರಿಯಾದ ನ್ಯಾಯ ಕೊಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಇಲ್ಲದಿದ್ದರೆ ಅವರ ಪರವಾಗಿ ಶಾಂತಿಯುತ ಹೋರಾಟವನ್ನು ಕಾವೇರಿ ನಿಸರ್ಗಧಾಮ ವಾಣಿಜ್ಯ ಸಂಕೀರ್ಣ ಪ್ರದೇಶದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಸಿದರು.
Back to top button
error: Content is protected !!