ಸುದ್ದಿಗೋಷ್ಠಿ

ಬಲವಂತದ‌ ಮಾತಾಂತರ ಖಂಡಿಸಿ ಜೂ 30 ರಂದು ಕುಶಾಲನಗರದಲ್ಲಿ ಜನಾಂದೋಲನ ಜಾಗೃತಿ ಸಭೆ: ಸ್ವಯಂಪ್ರೇರಿತ ಬಂದ್ ಗೆ ಕರೆ

ಕುಶಾಲನಗರ, ಜೂ 26: ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ
ಬಲವಂತದ‌ ಮಾತಾಂತರ ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಜೂ 30 ರ ಮಂಗಳವಾರ ಕುಶಾಲನಗರದಲ್ಲಿ ಜನಾಂದೋಲನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಮುಖ ಬಿ.ಅಮೃತ್ ರಾಜ್ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಮುಸಲ್ಮಾನರ ವ್ಯಾಪಾರ ಕೇಂದ್ರದಲ್ಲಿ ನಡೆದಿರುವ ಮತಾಂತರ ಖಂಡಿಸಿ‌ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕುಶಾಲನಗರದ‌ ವಿವಿಧ ಸಮುದಾಯಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಅಂದು ಬೆಳಗಿನಿಂದ ಮಧ್ಯಾಹ್ನದ ತನಕ ಕುಶಾಲನಗರದ ವರ್ತಕರು ಅರ್ಧ ದಿನ‌ ಸ್ವಯಂ ಪ್ರೇರಿತವಾಗಿ ಅಂಗಡಿ ‌ಮುಂಗಟ್ಟುಗಳನ್ನು ಬಂದ್ ಮಾಡಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಬೇಕಿದೆ ಎಂದು ಆಗ್ರಹಿಸಿದರು.
ಅಪ್ರಾಪ್ತನ ಮತಾಂತರ ಪ್ರಕರಣದ ಹಿಂದೆ ಬಹುದೊಡ್ಡ ಜಾಲವಿದೆ. ಈಗಾಗಲೆ ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು ಬಾಲಕನಿಗೆ ಸುನ್ನತ್ ಮಾಡಿಸಿದ ಕೇರಳದ ಮಂಜೇರಿಯಲ್ಲಿರುವ ಕೇಂದ್ರದ ಲೈಸೆನ್ಸ್ ಮುಟ್ಟುಗೋಲು ಹಾಕಬೇಕಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆ ಕೂಡ ದಾಖಲಾಗಬೇಕಿದೆ ಎಂದು ಅಮೃತ್‌ರಾಜ್ ಆಗ್ರಹಿಸಿದರು.

ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ, ಬೇರೆ ಬೇರೆ ಪ್ರದೇಶಗಳಲ್ಲಿ ವರದಿಯಾಗುತ್ತಿದ್ದ ಬಲವಂತದ ಮತಾಂತರ ಪ್ರಕರಣ ಕೊಡಗಿನ ಕುಶಾಲನಗರಕ್ಕೂ ಕಾಲಿಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.‌ಇದರ ವಿರುದ್ದ ಹಿಂದೂ ಸಮುದಾಯ ಪ್ರತಿಭಟಿಸಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಜನಜಾಗೃತಿ ‌ಕಾರ್ಯಕ್ರಮದಲ್ಲಿ ಗೌಡ ಸಮುದಾಯ ಬಾಂಧವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ
ಆರ್ಯ ವೈಶ್ಯ ಮಂಡಳಿ ಉಪಾಧ್ಯಕ್ಷ ಅಶೋಕ್, ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್, ದೇವಾಂಗ ಸಂಘದ ಅಧ್ಯಕ್ಷ ಡಿ.ವಿ.ರಾಜೇಶ್, ಕೊಡವ ಸಮಾಜ ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ ಅವರು ಕೂಡ ಬಲವಂತದ ಮತಾಂತರ ಘಟನೆಯನ್ನು ಖಂಡಿಸಿದರು. ತಮ್ಮ ತಮ್ಮ ಸಮುದಾಯ ಬಾಂಧವರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ಈ ಸಂದರ್ಭ ಹಿಂದೂ ಸುರಕ್ಷಾ ಸಮಿತಿಯ ಭರತ್ ಮಾಚಯ್ಯ, ಮಂಜುನಾಥ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!